ತುಮಕೂರು: ಸಿದ್ಧಗಂಗೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಕ್ಷೇತ್ರದ ಆರಾಧ್ಯದೈವ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಧ್ಯಾಹ್ನ 12ಕ್ಕೆ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ರಥದ ಗಾಲಿಗೆ ತೆಂಗಿನಕಾಯಿ ಒಡೆದು, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ಸಿಕ್ಕಿತು.
ರಥೋತ್ಸವ ಆರಂಭವಾದ ಸಂದರ್ಭಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಸೇರಿ ವಿವಿಧ ಮಠಾಧೀಶರು ಸಾಕ್ಷಿಯಾದರು. ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಚೇರಿ ಮುಂಭಾಗದಿಂದ ವೀರಗಾಸೆ, ನಂದಿಧ್ವಜ, ಡೊಳ್ಳುಕುಣಿತ ಸೇರಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಪ್ರದಕ್ಷಿಣೆ ಹಾಕಿ ರಥಕ್ಕೆ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಕೂರಿಸಲಾಯಿತು.
ರಥವನ್ನು ಅಭೂತಪೂರ್ಣ ವಸ್ತ್ರ, ಸುವರ್ಣ ಕಳಶಗಳಿಂದ ಧಾರ್ಮಿಕ ಲಾಂಛನ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು. ರಥಕ್ಕೆ ಫಲ, ಪುಷ್ಪ ಸಮರ್ಪಿಸಿ ಭಕ್ತಿ ಮೆರೆದರು. ರಥ ಸಾಗಿದ ದಾರಿಯುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿ ವಿವಿಧ ಜನಪದ ಕಲಾ ತಂಡಗಳ ಪ್ರದರ್ಶನ ನೆರೆದಿದ್ದ ಭಕ್ತರ ಗಮನ ಸೆಳೆದವು.
ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಡು ಬಿಸಿಲಿನಲ್ಲಿಯೂ ರಥೋತ್ಸವದಲ್ಲಿ ಭಾಗಿಯಾದರು. ಇಷ್ಟಾರ್ಥ ಸಿದ್ಧಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು. ಶಿವರಾತ್ರಿ ಪ್ರಯುಕ್ತ ಜಾಗರಣೆಗಾಗಿ ನಾಡಿನಾದ್ಯಂತ ಸಹಸ್ರಾರು ಭಕ್ತರು ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿದ್ದು ಇಂದು ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಶ್ರೀಮಠದ ಶಾಲಾ ಕಟ್ಟಡಗಳ ಮೇಲಿಂದಲೂ ನಿಂತು ಭಕ್ತರು ರಥೋತ್ಸವ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಿದರು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.