ನೆಲಮಂಗಲ : ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶ್ರಮಿಸಿದ್ದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನವನ್ನೇ ನೀಡಬಹುದಾಗಿತ್ತು ಎಂದು ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿಶ್ವನಾಥ್ ಅವರ ಸಿಂಗನಾಯಕಹಳ್ಳಿಯ ಗೃಹಕಚೇರಿಗೆ ಶನಿವಾರ ಭೇಟಿ ನೀಡಿದ್ದ ಅವರು, ಶಾಸಕರನ್ನು ಆಶೀರ್ವದಿಸಿ ಮಾತನಾಡಿದರು. ಸಮರ್ಥ ನಾಯಕರಿಗೆ ಅಧಿಕಾರ ನೀಡಿದರೆ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು. ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಒತ್ತುವರಿ ತೆರವಿಗೆ ಕ್ರಮ : ನಕಲಿ ದಾಖಲೆ ಸೃಷ್ಟಿಸಿ ಬಿಡಿಎಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಕಬಳಿಸುವ ಸಂಚು ನಡೆದಿದ್ದನ್ನು ಬಯಲಿಗೆ ಎಳೆಯಲಾಗಿದೆ. ಕೆಲ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆ ಇದೆ. ತನಿಖೆ ನಡೆಸುವ ಜತೆಗೆ ಪೊಲೀಸ್ ಇಲಾಖೆ ಸಹಕಾರ ಪಡೆದು ಪಟ್ಟಭದ್ರರಿಂದ ಒತ್ತುವರಿ ಆಗಿರುವ ಬಿಡಿಎ ಆಸ್ತಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳುವುದಾಗಿ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಕುಣಿಗಲ್ ತಾಲೂಕು ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ, ಬೆಂಗಳೂರು ನಿಜಗುಣ ಮಠದ ನಿಜಗುಣ ಸ್ವಾಮೀಜಿ, ಬೆಂಗಳೂರು ಉತ್ತರ ತಾಲೂಕು ಭೂನ್ಯಾಯಮಂಡಳಿ ಸದಸ್ಯ ಎಚ್. ಬಸವರಾಜು, ಮುಖಂಡ ಎಚ್.ಬಿ.ಜಗದೀಶ್, ಬೈಯಂಡಹಳ್ಳಿ ಚಂದ್ರಶೇಖರ್ ಮತ್ತಿತರರು ಇದ್ದರು.