ಜಿಲ್ಲೆ

ಕಾವ್ಯಕ್ಕೆ ಜಾನಪದ ಶಕ್ತಿ ತುಂಬಿದವರು ಸಿದ್ದಲಿಂಗ ದೇಸಾಯಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ದಿ. ಸಿದ್ದಲಿಂಗ ದೇಸಾಯಿ ಗ್ರಾಮೀಣ ಸಂಸ್ಕೃತಿಯಲ್ಲಿ ಬೆಳೆದು ತಮ್ಮ ಕಾವ್ಯಕ್ಕೆ ಜಾನಪದದ ಶಕ್ತಿ ತುಂಬಿದರು ಎಂದು ಬಸವ ಶಾಂತಿ ಮಿಷನ್​ ಅಧ್ಯಕ್ಷ ಮಹಾದೇವ ಹೊರಟ್ಟಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಸಿದ್ದಲಿಂಗ ದೇಸಾಯಿ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಕವಿವಿ ಮಾಜಿ ಕುಲಪತಿ ಡಾ. ಆರ್​.ಸಿ. ಹಿರೇಮಠ ಅವರು ಸಿದ್ದಲಿಂಗ ದೇಸಾಯಿಯವರ ಪಾಡಿಂತ್ಯ ಗಮನಿಸಿ ಕವಿವಿಯಲ್ಲಿ ಅನುವಾದಕರನ್ನಾಗಿ ನೇಮಕ ಮಾಡಿಕೊಂಡರು. ಅವರದು ಸತ್ವಯುತ ಸಾಹಿತ್ಯವಾಗಿತ್ತು. ಆದರೆ ದುರಂತವೆಂದರೆ ಅವರು ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಿಲ್ಲ ಎಂದು ವಿಷಾದಿಸಿದರು.

ನೀಲಕಂಠ ಅಸೂಟಿ ಮಾತನಾಡಿ, ಸಿದ್ದಲಿಂಗ ದೇಸಾಯಿ ವಿದ್ಯಾ ಸಂಪನ್ನರು. ಯೋಜನೆ ರೂಪಿಸುವಲ್ಲಿ ಸಿದ್ಧ ಹಸ್ತರಾಗಿದ್ದರು. ಅವರಲ್ಲಿನ ಜೀವನೋತ್ಸಾಹ ಅನನ್ಯವಾದುದು ಎಂದರು.

ಸೋಮಲಿಂಗ ಉಳ್ಳಿಗೇರಿ ನಾತನಾಡಿ, ಸಿದ್ದಲಿಂಗ ದೇಸಾಯಿ ಚಂಪಾ ಅವರ ಅಂತರಂಗದ ಶಿಷ್ಯರು. ಬೇಂದ್ರೆಯವರ ಪ್ರಭಾವದಿಂದ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡರು ಅವರ ಸಿಕ್ಕೇದುಂಗುರ ಎಂಬ ರೇಡಿಯೋ ನಾಟಕ ರಾಷ್ಟ್ರೀಯ ಪ್ರಶಸ್ತಿ ಪಡೆದಿತ್ತು ಎಂದರು.

ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜೇಂದ್ರ ಸಾವಳಗಿ ಮಾತನಾಡಿದರು. ಅಭಿಷೇಕ ಸಿದ್ದಲಿಂಗ ದೇಸಾಯಿ ದತ್ತಿ ದಾನಿ ಪರ ಮಾತನಾಡಿದರು. ಡಾ. ಜಿನದತ್ತ ಹಡಗಲಿ ಅಧ್ಯಕ್ಷತೆ ವಹಿಸಿದ್ದರು. ಶಿವರುದ್ರಗೌಡ ದೇಸಾಯಿ, ವಿದ್ಯಾಶ್ರೀ ದೇಸಾಯಿ , ಡಾ. ಬಾಳಣ್ಣ ಶೀಗಿಹಳ್ಳಿ, ಇತರರು ಇದ್ದರು.

ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

ನಂತರ ಅಭಿಷೇಕ ದೇಸಾಯಿ ರಚನೆ ಹಾಗೂ ನಿರ್ದೇಶನದ ಹೇರಿಕೆ ನಾಟಕ ಪ್ರದರ್ಶನಗೊಂಡಿತು.