ಜಿಲ್ಲೆ

ಗಣಿತ ಪ್ರಯೋಗಾಲಯದಿಂದ ಗಣಿತ ಕಲಿಕೆ ಸುಲಭ: ಎಂ. ಎ. ರಡ್ಡೇರ

Gadag - Shivanand Hiremath

ಗದಗ: ಈವರೆಗೆ ನಾವು ಕಾಣುತ್ತಿದ್ದುದು ಬರೀ ವಿಜ್ಞಾನ ಪ್ರಯೋಗಾಲಯಗಳನ್ನು ಮಾತ್ರ. ಆದರೆ ಈಚೆಗೆ ಗಣಿತ ಪ್ರಯೋಗಾಲಯಗಳಿಗೂ ಹೆಚ್ಚಿನ ಚಾಲನೆ ದೊರಕಿರುವುದರಿಂದ ಬಹುತೇಕ ಶಾಲೆಗಳಲ್ಲಿ ಗಣಿತ ಪ್ರಯೋಗಾಲಯಗಳು ಪ್ರಾರಂಭವಾಗುತ್ತಿರುವುದು ಸಂತಸಕರ ಸಂಗತಿ. ಗಣಿತ ಪ್ರಯೋಗಾಲಯಗಳಿಂದ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸಿರುವ ಗಣಿತದ ಕಲಿಕೆ ಸುಲಭವಾಗುತ್ತದೆ ಎಂದು ಗದಗ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಂ. ಎ. ರಡ್ಡೇರ ಹೇಳಿದರು.
ನಗರದ ಸಿದ್ದಲಿಂಗ ನಗರದ ಸರಕಾರಿ ಪ್ರೌಢಶಾಲೆಗೆ ಈಚೆಗೆ ಭೇಟಿ ನೀಡಿದ್ದ ಅವರು ಅಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ನ ನಿರ್ದೇಶಕಿ ಹೇಮಲತಾ ಬಸವರಾಜ ಹೊರಟ್ಟಿಯವರ ಸಹಕಾರದಿಂದ ನಿರ್ಮಾಣಗೊಳ್ಳುತ್ತಿರುವ, ಶೀಘ್ರದಲ್ಲಿಯೆ ಲೋಕಾರ್ಪಣೆಗೊಳ್ಳಲಿರುವ ಹೇಮಲತಾ ಬಸವರಾಜ ಹೊರಟ್ಟಿ ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪ್ರಗತಿಯನ್ನು ಗಮನಿಸಿ ಮಾತನಾಡಿದರು.
ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಉದ್ದೇಶಗಳನ್ನು ಅವ್ವ ಸೇವಾ ಟ್ರಸ್ಟ್ನ ಸಂಚಾಲಕ ಡಾ. ಬಸವರಾಜ ಧಾರವಾಡ ಉಪನಿರ್ದೇಶಕರಿಗೆ ವಿವರಿಸಿದರು. ಇದರಿಂದ ಮಕ್ಕಳು ಸ್ವತಃ ಮಾದರಿಗಳೊಂದಿಗೆ ಗಣಿತ ಕಲಿಯಲು ಅತ್ಯಂತ ಸುಲಭ ಮತ್ತು ಸರಳವಾಗುತ್ತದೆ ಎಂದು ಹೇಳಿದರು. ಈ ಮಾತಿಗೆ ಸಹಮತ ಸೂಚಿಸಿದ ಉಪನಿರ್ದೇಶಕರು ಈ ಪ್ರಯೋಗಾಲಯದ ಉಪಯೋಗವನ್ನು ಶಿಕ್ಷಕರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಒದಗಿಸಿಕೊಡಬೇಕೆಂದು ತಿಳಿಸಿದರು.
ಈ ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ೫೮ ವಿವಿಧ ಬಗೆಯ ಮಾಡೆಲ್‌ಗಳಿವೆ, ಕಠಿಣತರ ಪ್ರಮೇಯಗಳನ್ನು ಸುಲಭವಾಗಿ ಕಲಿಯಲು, ಕೋನಗಳ ವಿವಿಧ ಬಗೆಗಳನ್ನು ಅರಿಯಲು, ಚತುರ್ಭುಜದ ಪ್ರಕಾರಗಳನ್ನು ತಿಳಿಯಲು, ವೃತ್ತಗಳ ಮೇಲಿನ ಪ್ರಮೇಯಗಳನ್ನು ಮತ್ತು ಗುಣ ಲಕ್ಷಣಗಳನ್ನು ಅಭ್ಯಸನ ಮಾಡಲು, ತ್ರಿಕೋನಮಿತಿಯನ್ನು ತಿಳಿಯಲು, ಸೂತ್ರಗಳ ಉತ್ಪತ್ತಿಯನ್ನು ಅರಿಯಲು ಹೀಗೆ ವಿವಿಧ ಬಗೆಯ ಮಾಡೆಲ್‌ಗಳು ಮಕ್ಕಳ ಮನಸೂರೆಗೊಳ್ಳುವದರ ಜೊತೆಗೆ ಅವರ ಕೈಯಲ್ಲಿಯೆ ಮಾದರಿಗಳು ಸಿಗುವದರಿಂದ ಗಣಿತದ ಕಲಿಕೆ ಅವರಿಗೆ ಅತ್ಯಂತ ಸರಳವಾಗುತ್ತದೆ. ಈ ವಿಷಯದಲ್ಲಿ ಹೇಮಲತಾ ಬಸವರಾಜ ಹೊರಟ್ಟಿ ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರವು ಮಕ್ಕಳಿಗೆ ತುಂಬಾ ಉಪಕಾರಿಯಾಗಿದೆ ಎಂದು ಉಪನಿರ್ದೇಶಕ ಎಂ. ಎ. ರಡ್ಡೇರ ಅಭಿಪ್ರಾಯಪಟ್ಟರು.
ಮೂಲತಃ ಶಿಕ್ಷಕರಾಗಿರುವ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಂದಿಗೂ ಸಹಕಾರಿಯಾಗಿದ್ದಾರೆ. ಈ ಸರಕಾರಿ ಪ್ರೌಢಶಾಲೆಯನ್ನು ದತ್ತು ತೆಗೆದುಕೊಂಡಿರುವ ಅವರು ಈಗಾಗಲೆ ಈ ಶಾಲೆಗೆ ಒಂದು ಸುಂದರ ರಂಗ ಮಂದಿರವನ್ನು ನಿರ್ಮಿಸಿಕೊಟ್ಟಿದ್ದಾರೆ. ಈಗ ಅವರ ಶ್ರೀಮತಿ ಹೇಮಲತಾ ಹೊರಟ್ಟಿಯವರ ಸಹಕಾರದಿಂದ ಈ ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣಗೊಂಡು ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗುತ್ತಿರುವುದಕ್ಕೆ ತಾವು ಇಲಾಖೆಯ ವತಿಯಿಂದ ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದಾಗಿ ಉಪನಿರ್ದೇಶಕ ರಡ್ಡೇರ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವ್ವ ಸೇವಾ ಟ್ರಸ್ಟ್ನ ಸಂಚಾಲಕ ಡಾ. ಬಸವರಾಜ ಧಾರವಾಡ ಈ ಕಾರ್ಯದಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ನೊಂದಿಗೆ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರವೂ ಕೈಜೋಡಿಸಿದೆ. ಕೇಂದ್ರದ ಮಾರ್ಗದರ್ಶಕರು ಹಾಗೂ ನಿರ್ದೇಶಕರಾಗಿರುವ ಡಾ. ವೀರಣ್ಣ ಬೋಳಶೆಟ್ಟಿಯವರ ಮಾರ್ಗದರ್ಶನದಲ್ಲಿ ಈ ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರವು ಸುಸಜ್ಜಿತವಾಗಿ ರೂಪುಗೊಳ್ಳುತ್ತಿದೆ. ಈ ಪ್ರೌಢಶಾಲೆಯಲ್ಲಿ ಇರುವ ಗಣಿತ ಶಿಕ್ಷಕರಾಗಿರುವ ಶಾರದಾ ಬಾಣದ, ಸುಮಂಗಲಾ ಪತ್ತಾರ ಮತ್ತು ಆರ್. ವೈ. ಬಸರಿ ಶಿಕ್ಷಕರು ಈ ಗಣಿತ ಕೇಂದ್ರದ ಮೇಲುಸ್ತುವಾರಿಯನ್ನು ವಹಿಸಿಕೊಂಡು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಸ್. ಬುರಡಿ, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಸರಸ್ವತಿ ಕನವಳ್ಳಿ, ನಗರಸಭಾ ಸದಸ್ಯೆ ವಿದ್ಯಾ ಗಡಗಿ, ಹೇಮಲತಾ ಬ. ಹೊರಟ್ಟಿ ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರದ ಮಾರ್ಗದರ್ಶಕ ಅರುಣ ಬಿ. ಕುಲಕರ್ಣಿ, ಅನ್ನದಾನೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ. ಎಚ್. ಪೂಜಾರ, ಶಿಕ್ಷಕ ಜಿ. ಎಸ್. ಕೋಲ್ಮಿ, ದಾನಿಗಳಾದ ಸುನೀಲ ವರ್ಣೇಕರ ದಂಪತಿಗಳು, ಮುಖ್ಯೋಪಾಧ್ಯಾಯಿನಿ ಪಾರ್ವತಿ ವಸ್ತçದ ಮತ್ತು ಶಾಲಾ ಸಿಬ್ಬಂದಿಯವರೆಲ್ಲರೂ ಉಪಸ್ಥಿತರಿದ್ದರು.
೨೭-ಗದಗ೧-ಗದಗ ನಗರದ ಸಿದ್ಧಲಿಂಗ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ್ದ ಉಪನಿರ್ದೇಶಕ ಎಂ. ಎ. ರಡ್ಡೇರ ಅವರು ಅಲ್ಲಿ ನಿರ್ಮಾಣಗೊಳ್ಳುತ್ತಿರುವ ಹೇಮಲತಾ ಬಸವರಾಜ ಹೊರಟ್ಟಿ ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಕುತೂಹಲದಿಂದ ಗಣಿತ ಮಾದರಿಗಳನ್ನು ವೀಕ್ಷಿಸಿದರು.