ಬಂಟ್ವಾಳ: ಇಲ್ಲಿನ ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಭಾನುವಾರ ರಾತ್ರಿ ಸಮಾಪನಗೊಂಡ ಎರಡನೇ ವರ್ಷದ ರೋಟರಿ ಕಂಬಳಕ್ಕೆ ಕೆಲಹೊತ್ತು ಸುರಿದ ಧಾರಾಕಾರ ಮಳೆ ಅಡ್ಡಿಯಾಯಿತು.
ಭಾನುವಾರ ಬೆಳಗ್ಗೆಯಿಂದ ಸಂಜೆ ತನಕ ಸುಡು ಬಿಸಿಲು ಕಂಡು ಬಂದಿದ್ದರೆ, ಸಂಜೆ 6ರ ಬಳಿಕ ರಾತ್ರಿ 9ರ ತನಕ ಭಾರಿ ಮಳೆಯಾಗಿದೆ. ಈ ಮಳೆಯ ನಡುವೆ ಸುಸಜ್ಜಿತ ಕರೆಯಲ್ಲಿ ಕಂಬಳ ಯಶಸ್ವಿಯಾಗಿ ಸಮಾಪನಗೊಂಡಿದ್ದು, ಒಟ್ಟು 127 ಜೋಡಿ ಓಟದ ಕೋಣಗಳು ಭಾಗವಹಿಸಿ ಗಮನ ಸೆಳೆಯಿತು.
ರಾತ್ರಿ 11ರ ಬಳಿಕ ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕೋಣಗಳ ಅಂತಿಮ ಸುತ್ತಿನ ಓಟ ಕೊಂಬು, ಬ್ಯಾಂಡ್ ವಾದ್ಯ ಸಹಿತ ಧ್ವನಿವರ್ಧಕ ಇಲ್ಲದೆ ಪೂರ್ಣಗೊಂಡಿತು. ಇತ್ತೀಚೆಗಷ್ಟೆ ಮೂಡುಬಿದಿರೆ ಕಡಲಕೆರೆಯಲ್ಲಿ ನಡೆದಿದ್ದ ಸ್ನೇಹಕೂಟ ಕಂಬಳ ಶನಿವಾರ ಆರಂಭಗೊಂಡು ಮರುದಿನ ಬೆಳಗ್ಗೆ 5ರ ತನಕ ನಡೆದಿದೆ. ಆದರೆ ಕಮಿಷನರೇಟ್, ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ಈ ತಾರತಮ್ಯ ಏಕೆ ಎಂದು ಕಂಬಳ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ರಾಜೇಶ್ ಮತ್ತಿತರ ಸಿಬ್ಬಂದಿ ಇದ್ದರು.
ಕಂಬಳ ಫಲಿತಾಂಶ
ಹಗ್ಗ ಕಿರಿಯ: ಪ್ರಥಮ ಬಹುಮಾನ- ಲೊರೆಟ್ಟೋ ಮಹಲ್ತೋಟ ಆನ್ಯ ಅವಿಲ್ ಮಿನೆಜಸ್, ಓಡಿಸಿದವರು- ಕಕ್ಯಪದವು ಕೃತಿಕ್ ಗೌಡ. ದ್ವಿತೀಯ ಬಹುಮಾನ- ಪೇಜಾವರ ತಿದ್ಯಾ ಕಂಬಳಗುತ್ತು ಶಾರದಾ ಸತೀಶ್ ಶೆಟ್ಟಿ, ಓಡಿಸಿದವರು- ರೆಂಜಾಳ ಪಂಜಾಳ ಸಂದೇಶ್ ಶೆಟ್ಟಿ.
ನೇಗಿಲು ಕಿರಿಯ: ಪ್ರಥಮ ಬಹುಮಾನ- ಹೊಸ್ಮಾರು ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ, ಓಡಿಸಿದವರು- ಬಾರಾಡಿ ನತೇಶ್. ದ್ವಿತೀಯ ಬಹುಮಾನ- ನಿಟ್ಟೆ ಪರಪ್ಪಡಿ ಸುರೇಶ್ ಕೋಟ್ಯಾನ್, ಓಡಿಸಿದವರು- ಕಕ್ಯಪದವು ಕೃತಿಕ್ ಗೌಡ.
ನೇಗಿಲು ಸಬ್ ಜೂನಿಯರ್: ಮೊದಲ ಬಹುಮಾನ- ಕೊಡವೂರು ಕಂಬಳಕಟ್ಟ ಪಂಚರತ್ನ ಬೈಲುಮನೆ ಸಂತೋಷ್ ಶೆಟ್ಟಿ, ಓಡಿಸಿದವರು- ಪಣಪಿಲ ಪ್ರವೀಣ್ ಕೋಟ್ಯಾನ್. ಎರಡನೇ ಬಹುಮಾನ- ಬೈಲ್ ಕೌಡರು ಕೋರಿಪಡ್ಪು ಮುಂಡಪ್ಪ ಪೂಜಾರಿ, ಓಡಿಸಿದವರು- ವಿಟ್ಲ ಗುಂಡ್ಯಡ್ಕ ಕಿಶೋರ್ ಪೂಜಾರಿ.