ಜಿಲ್ಲೆ

ಕೃಷಿ ಇಲಾಖೆಗೆ ಪ್ರಥಮ ಪಾರಿತೋಷಕ ; ಸಿದ್ಧಗಂಗಾ ಮಠದಲ್ಲಿ ಕೃಷಿ-ಕೈಗಾರಿಕಾ ವಸ್ತುಪ್ರದರ್ಶನ ಮುಕ್ತಾಯ

ತುಮಕೂರು : ಶ್ರೀಸಿದ್ಧಗಂಗಾ ಮಠದಲ್ಲಿ ಫೆ.18 ರಿಂದ ನಡೆಯುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಕೃಷಿ ಇಲಾಖೆಗೆ ಪ್ರಥಮ ಪಾರಿತೋಷಕ ಮತ್ತು ಪ್ರಥಮ ಬಹುಮಾನ ನೀಡಲಾಯಿತು.

ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ವಸ್ತು ಪ್ರದರ್ಶನದ ಮುಕ್ತಾಯ ಸಮಾರಂಭದಲ್ಲಿ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಅವರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಬಹುಮಾನ ನೀಡಿದರು. ಅರಣ್ಯ ಇಲಾಖೆ ದ್ವಿತೀಯ ಪಾರಿತೋಷಕ ಮತ್ತು ಪ್ರಥಮ ಬಹುಮಾನ ಹಾಗೂ ತೋಟಗಾರಿಕೆ ಇಲಾಖೆಯು ತೃತೀಯ ಪಾರಿತೋಷಕ ಮತ್ತು ಪ್ರಥಮ ಬಹುಮಾನ ಗಳಿಸಿಕೊಂಡಿದೆ.

ರೇಷ್ಮೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಾರ್ವಜನಿಕ ಶಿಕ್ಷಣ ಇಲಾಖೆಗಳು ಸೇರಿ ಜಿಲ್ಲಾ ಪಶು ಆಸ್ಪತ್ರೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಗ್ರಾಮೀಣ ಕೈಗಾರಿಕೆ, ಶ್ರೀಸಿದ್ಧಗಂಗಾ ಆಸ್ಪತ್ರೆ ಹಾಗೂ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯಕ್ಕೆ ಪ್ರಥಮ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಜಲಾನಯನ ಅಭಿವೃದ್ಧಿ, ಮೀನುಗಾರಿಕೆ, ಕೈಮಗ್ಗ ಮತ್ತು ಜವಳಿ ಇಲಾಖೆ ಸೇರಿ ತುಮಕೂರು ಮಹಾನಗರಪಾಲಿಕೆ, ಜಿಪಂ ಯೋಜನಾ ಶಾಖೆ, ಶ್ರೀಸಿದ್ಧಗಂಗಾ ವಿದ್ಯಾ ಸಂಸ್ಥೆ, ಶ್ರೀರಂಗನಾಥ ಅಗ್ರಿಮಾರ್ಟ್ ಹಾಗೂ ಜಯಾ ಏಜೆನ್ಸೀಸ್ ಸಂಸ್ಥೆಯು ದ್ವಿತೀಯ ಬಹುಮಾನ ಪಡೆದುಕೊಂಡವು. ಶ್ರೀಸಿದ್ಧಗಂಗಾ ಜನಶಿಕ್ಷಣ ಸಂಸ್ಥೆ, ಬಾಲಾಜಿ ಟ್ರೇಡಿಂಗ್ ಕಂಪನಿ, ಜಯನಗರದ ರಾಯಲ್ ಓಕ್ಸ್, ಬಾಲಾಜಿ ಟಿವಿಎಸ್ ಶೋರೂಂ, ಚಿರಂತನ ಪುಸ್ತಕ ಮಳಿಗೆ ಹಾಗೂ ವಾಹಿನಿ ಪೈಪ್ಸ್‌ಗಳಿಗೆ ತೃತೀಯ ಬಹುಮಾನ ನೀಡಲಾಯಿತು.

ವಸ್ತುಪ್ರದರ್ಶನದ ವಿದ್ಯುತ್‌ಚ್ಛಕ್ತಿ ವ್ಯವಸ್ಥೆ ಮತ್ತು ನಿರ್ವಹಣೆಗಾಗಿ ಹೆಗ್ಗೆರೆ ಬಿ.ಕೆ.ಶಿವಕುಮಾರ್, ವಸ್ತುಪ್ರದರ್ಶನ ಮುಂಭಾಗ ಹಾಗೂ ಉದ್ಯಾನವನಗಳ ವಿದ್ಯುತ್ ದೀಪ ವ್ಯವಸ್ಥೆಗಾಗಿ ತುಮಕೂರಿನ ಟಿ.ಕೆ.ಪದ್ಮರಾಜು, ಮಳಿಗೆ ನಿರ್ಮಾಣ ಹಾಗೂ ಅಲಂಕಾರಕ್ಕಾಗಿ ಕ್ಯಾತಸಂದ್ರದ ಹರೀಶ್, ವಸ್ತುಪ್ರದರ್ಶನದ ಧ್ವನಿವರ್ಧಕದ ಭೀಮೇಗೌಡ, ಉತ್ತಮ ವಿದ್ಯುತ್ ಸರಬರಾಜು ವ್ಯವಸ್ಥೆಗಾಗಿ ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಿಬ್ಬಂದಿ ವರ್ಗ, ಅಮ್ಯೂಸ್‌ಮೆಂಟ್ ಪ್ರದರ್ಶನಕ್ಕಾಗಿ ದಾವಣಗೆರೆಯ ಎ.ಭದ್ರಪ್ಪ ಅವರ ಅಜಂತ ವಸ್ತುಪ್ರದರ್ಶನ, ರಂಗಮಂದಿರದ ಧ್ವನಿವರ್ಧಕ ಮತ್ತು ಲೈಟಿಂಗ್ ವ್ಯವಸ್ಥೆಗಾಗಿ ಪ್ರೇಮ್‌ಕುಮಾರ್ ಅರುಣ್ ಸೌಂಡ್ಸ್, ಫುಡ್ ಸ್ಟಾಲ್‌ಗಾಗಿ ಎಚ್.ಎಸ್.ಪರಶಿವು, ಕ್ಯಾತಸಂದ್ರದ ಕಲಾವಿದ ದಿನೇಶ್ ಅವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.

ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮತ್ತಿತರರು ಇದ್ದರು.