ಜಿಲ್ಲೆ

ಇಂದು ಸಿದ್ಧಗಂಗಾ ಶ್ರೀ ಜಯಂತಿ; ಸಿದ್ಧಗಂಗೆಯಲ್ಲಿ ಹಬ್ಬದ ಸಂಭ್ರಮ, ಅಮಿತ್ ಷಾ ಭೇಟಿ

theerthaswamy

ತುಮಕೂರು: ಸಿದ್ಧಗಂಗೆಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಆಚರಣೆಗೆ ನಗರ ಸಿಂಗಾರಗೊಂಡಿದೆ.

ಕಳೆದ 2 ವರ್ಷಗಳಿಂದ ಕರೊನಾ ಕಾರಣ ಸರಳ ಆಚರಣೆಗೆ ಸೀಮಿತಗೊಂಡಿದ್ದ ಜನ್ಮದಿನ ಈ ಬಾರಿ ಅದ್ದೂರಿತನ ಪಡೆದುಕೊಂಡಿದೆ. ಶುಕ್ರವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಕೇಸರಿಮಯಗೊಂಡಿದೆ. ಎಲ್ಲೆಡೆ ಕೇಸರಿ ಬಂಟಿಂಗ್ಸ್, ಬ್ಯಾನರ್​ಗಳು, ಫ್ಲೆಕ್ಸ್​ಗಳು ಕಂಡುಬರುತ್ತಿವೆ. ಏ.1 ರಂದು ಬೆಳಗ್ಗೆ 10.30ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್​ನಲ್ಲಿ ಬಂದಿಳಿಯುವ ಅಮಿತ್ ಷಾ, ರಸ್ತೆ ಮಾರ್ಗವಾಗಿ ಶ್ರೀಮಠಕ್ಕೆ ತಲುಪಲಿದ್ದಾರೆ. ಸಿದ್ಧಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಬಳಿಕ 11ಕ್ಕೆ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹಾಗೂ ಗಣ್ಯರ ಜತೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಡಿನ ಜನತೆ ಪರವಾಗಿ ಶ್ರೀಗಳಿಗೆ ಗೌರವ ಸಮರ್ಪಿಸುವರು.

ಮಠದ ಭ್ರಾತೃತ್ವ ದೇಶಕ್ಕೆ ಅಗತ್ಯ: ತ್ರಿವಿಧ ದಾಸೋಹದ ತಪೋನೆಲ ಸಿದ್ಧಗಂಗೆಯಲ್ಲಿ ಬಸವಣ್ಣನವರ ತತ್ವ, ಆದರ್ಶ ಪಾಲನೆಯಾಗುತ್ತಿದೆ, ಸಿದ್ಧಗಂಗಾ ಮಠದ ಭ್ರಾತೃತ್ವ ಈ ದೇಶಕ್ಕೆ ಅಗತ್ಯವಿದೆ ಎಂದು ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಹೇಳಿದರು. ಶಿವಕುಮಾರ ಶ್ರೀಗಳ ಜನ್ಮದಿನ ಹಿನ್ನೆಲೆಯಲ್ಲಿ ಗುರುವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ರ್ಚಚಿಸಿದರು.

ವಿಜಯೇಂದ್ರ ಪಣ: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಲಿಂಗೈಕ್ಯ ಡಾ.ಶಿವಕುಮಾರ ಮಹಾಶಿವಯೋಗಿಗಳ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ಐತಿಹಾಸಿಕ ಉತ್ಸವವನ್ನಾಗಿಸುವ ನಿಟ್ಟಿನಲ್ಲಿ ಶ್ರೀಗಳ ಜನ್ಮದಿನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೊಂಕ ಕಟ್ಟಿ ನಿಂತಿದ್ದಾರೆ. ವಿಜಯೇಂದ್ರ ನೇತೃತ್ವದ ತಂಡವು ಗುರುವಂದನಾ ಮಹೋತ್ಸವದ ಯಶಸ್ಸಿಗೆ ಕಳೆದೊಂದು ವಾರದಿಂದ ಶ್ರಮಿಸುತ್ತಿದೆ.

ಸಿದ್ದಲಿಂಗ ಶ್ರೀಗಳು ನೇತೃತ್ವ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ನುಡಿನಮನ ಸಲ್ಲಿಸುವರು. ಸಿದ್ಧಗಂಗಾ ಫಾರ್ಮಸಿ ಕಾಲೇಜಿನ ಕಟ್ಟಡಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ ಮೊದಲಾದವರು ಉಪಸ್ಥಿತರಿರುವರು.

ಗುರುವಂದನಾ ಮಹೋತ್ಸವ ವೇದಿಕೆಗೆ ‘ನಡೆದಾಡುವ ದೇವರ ಬಸವ ಭಾರತ’ ಹೆಸರಿಡಲಾಗಿದ್ದು, ಬಿ.ವೈ.ವಿಜಯೇಂದ್ರ ಕಲ್ಪನೆಯಂತೆ ಆಕರ್ಷಕ ವೇದಿಕೆ, ಸಭಾಂಗಣ ತಲೆಎತ್ತಿದೆ. 80ಗಿ60 ಅಡಿ ಬೃಹತ್ ವೇದಿಕೆಯಲ್ಲಿ ಬೆಟ್ಟ-ಗುಡ್ಡಗಳ ನಡುವೆ ಶ್ರೀಗಳ ಭಾವಚಿತ್ರ ವಿಶೇಷವಾಗಿ ಮೂಡಿಬಂದಿದೆ. 111 ವರ್ಷ ಸಾರ್ಥಕ ಬದುಕು ಸಾಗಿಸಿದ ಪ್ರತೀ ಹೆಜ್ಜೆಗಳ ಶ್ರೀಗಳ ಚಿತ್ರಗಳ ಜತೆಗೆ ವೇದಿಕೆ ಕಾರ್ಯಕ್ರಮ ಎಲ್​ಇಡಿ ಸ್ಕ್ರೀನ್​ಗಳಲ್ಲಿ ಬಿತ್ತರಗೊಳ್ಳಲಿದೆ. 22 ಗಣ್ಯರಿಗೆ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ವಿವಿಧ ಮಠಾಧೀಶರಿಗೆ, ವಿವಿಐಪಿ, ವಿಐಪಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದಲ್ಲದೆ, ಮುಖ್ಯ ಸಭಾಂಗಣದಲ್ಲಿ ಭಕ್ತರಿಗೆ, ಸಾರ್ವಜನಿಕರಿಗೆ 14 ಸಾವಿರ ಆಸನಗಳು ಹಾಗೂ ಅಕ್ಕಪಕ್ಕದಲ್ಲಿ 6 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಬಿವೈವಿ ಟೀಂ: ಕಾರ್ಯಕ್ರಮದ ಯಶಸ್ಸಿಗೆ ಬಿ.ವೈ.ವಿಜಯೇಂದ್ರ ನೇತೃತ್ವದ ಟೀಂ ಹಗಲಿರುಳು ಶ್ರಮಿಸುತ್ತಿದ್ದು ಕೆಆರ್​ಐಡಿಎಲ್ ಅಧ್ಯಕ್ಷ ಎಂ.ಆರ್.ರುದ್ರೇಶ್, ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ವಿಜಯಸೇನೆ ಅಧ್ಯಕ್ಷ ಎಚ್.ಎನ್.ದೀಪಕ್ ನೇತೃತ್ವದ ದೊಡ್ಡ ಯುವ ಪಡೆ ಶ್ರೀಮಠದಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಪಡೆಗೆ ಬಿಜೆಪಿ ಯುವ ಮೋರ್ಚಾ, ಬಿಎಸ್​ವೈ-ಬಿವೈವಿ ಅಭಿಮಾನಿ ಬಳಗವು ಬೆಂಬಲವಾಗಿ ನಿಂತಿದೆ.

ಅಮಿತ್ ಷಾ ಟೈಂ ಲೈನ್

  •  10.30ಕ್ಕೆ ವಿವಿ ಹೆಲಿಪ್ಯಾಡ್​ಗೆ ಆಗಮನ
  •  10.40ಕ್ಕೆ ಶ್ರೀಮಠಕ್ಕೆ
  •  10.45ಕ್ಕೆ ಗದ್ದುಗೆ ದರ್ಶನ
  •  11.00ಕ್ಕೆ ವೇದಿಕೆ ಕಾರ್ಯಕ್ರಮ
  • =12.50ಕ್ಕೆ ಶ್ರೀಮಠದಿಂದ ನಿರ್ಗಮನ
  • =12.55ಕ್ಕೆ ಎಸ್​ಐಟಿಗೆ ಭೇಟಿ
  •  1.35ಕ್ಕೆ ವಿವಿ ಹೆಲಿಪ್ಯಾಡ್ ಕಡೆ
  •  1.45ಕ್ಕೆ ಬೆಂಗಳೂರಿನತ್ತ ಪಯಣ

8 ಕಡೆ ದಾಸೋಹ ವ್ಯವಸ್ಥೆ: ಶ್ರೀಗಳ ಗುರುವಂದನಾ ಮಹೋತ್ಸವಕ್ಕೆ 2 ಲಕ್ಷಕ್ಕೂ ಅಧಿಕ ಭಕ್ತರು ಸಾಕ್ಷಿಯಾಗುವ ನಿರೀಕ್ಷೆ ಇದೆ. ಬೆಳಗ್ಗೆಯಿಂದ ರಾತ್ರಿವರೆಗೆ ಶ್ರೀಮಠದಲ್ಲಿ ನಿರಂತರವಾಗಿ ದಾಸೋಹ ನೆರವೇರಲಿದೆ. ಕ್ಷೇತ್ರದ ಆವರಣದಲ್ಲಿ 8 ಕಡೆಗಳಲ್ಲಿ ನಿರ್ವಿುಸಲ್ಪಡುವ ಪ್ರಸಾದ ನಿಲಯಗಳಲ್ಲಿ ಬೆಳಗಿನ ಉಪಾಹಾರದಿಂದ ಆರಂಭವಾಗಿ ರಾತ್ರಿ 11ರವರೆಗೆ ಪ್ರಸಾದ ನೀಡಲು ಸಿದ್ಧತೆ ನಡೆದಿದೆ.