ಜಿಲ್ಲೆ

ಎ.ಎಸ್.ಕಿರಣ್‌ಕುಮಾರ್‌ಗೆ ಸಿದ್ದಗಂಗಾಶ್ರೀ ಪ್ರಶಸ್ತಿ

ತುಮಕೂರು: ಶ್ರೀಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ 2022-23ನೇ ಸಾಲಿನ ಸಿದ್ಧಗಂಗಾಶ್ರೀ ಪ್ರಶಸ್ತಿಗೆ ಶ್ರೇಷ್ಠ ಭೌತವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಭಾಜನರಾದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಅನನ್ಯ ಸೇವೆಯನ್ನು ಸಲ್ಲಿಸಿದ ಎ.ಎಸ್.ಕಿರಣ್‌ಕುಮಾರ್ ಜೀವಮಾನ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಂಘದ ಸರ್ವಸದಸ್ಯರ ಸಭೆಯಲ್ಲಿ ಭಾನುವಾರ ಪ್ರದಾನ ಮಾಡಿದರು. ಪ್ರಶಸ್ತಿ 1 ಲಕ್ಷ ರೂ. ನಗದು, ಅಭಿನಂದನಾ ಪತ್ರ ಹಾಗೂ ಸ್ಮರಿಣಿಕೆ ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎ.ಎಸ್.ಕಿರಣ್‌ಕುಮಾರ್, ವಿಜ್ಞಾನ-ತಂತ್ರಜ್ಞಾನದಿಂದ ವಿಶ್ವದಲ್ಲಿ ಕ್ರಾಂತಿಯೇ ಘಟಿಸಿದ್ದರೂ ಸಮಾಜದಲ್ಲಿ ಸಾಮರಸ್ಯತೆ, ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅತ್ಯವಶ್ಯ ಎಂದು ಅಭಿಪ್ರಾಯಿಸಿದರು.

ಚಂದ್ರನ ಮೇಲೆ ನಾವು ಇಳಿದಾಗಿದೆ. ಆದರೆ, ಭೂಮಿ ಮೇಲಿರುವರು ಸಾಮರಸ್ಯದ ಜೀವನ ನಡೆಸಲು ಮಠಮಾನ್ಯಗಳು ಮಾರ್ಗದರ್ಶನ ನೀಡಬೇಕು. ಮನುಷ್ಯ ಎಷ್ಟೇ ವಿಜ್ಞಾನ ತಂತ್ರಜ್ಞಾನ ಬಳಸಿಕೊಂಡು ಎಲ್ಲಾ ಕ್ಷೇತ್ರಗಳು ಕ್ರಾಂತಿಕಾರಿಕ ಹೆಜ್ಜೆಯನ್ನು ಇಟ್ಟಿರಬಹುದು. ವಿಜ್ಞಾನ-ತ್ರಂತ್ರಜ್ಞಾನ ದೇಶವನ್ನೇ ಬದಲಿಸಿರಬಹುದು. ಆದರೆ, ಮನುಷ್ಯರಂತೆ ಬಾಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ, ಸಂಸ್ಕಾರವನ್ನು ಕಲಿಸುವ ಅತ್ಯಗತ್ಯವಿದೆ. ಇಂತಹ ಮಹತ್ಕಾರ್ಯವು ಮಠಗಳಿಂದ ಸಾಧ್ಯವಿದ್ದು ಭಾರತ ದೇಶವು ಇಡೀ ಪ್ರಪಂಚದಲ್ಲಿ ನಂ.1 ಸ್ಥಾನಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಇದು ನನ್ನ ಸಾಧನೆಗೆ ಸಿಕ್ಕ ಪ್ರಶಸ್ತಿ ಅಲ್ಲ. ಇಸ್ರೋ ಸಂಸ್ಥೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ತೋರಿರುವ ಅಗಾಧ ಸಾಧನೆ ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ ಅಂತ ತಿಳಿದಿದ್ದೇನೆ. ನನ್ನ ಸಂಸ್ಥೆ, ನನ್ನ ಜತೆಗೆ ಕಾರ್ಯನಿರ್ವಹಿಸಿದ ಎಲ್ಲರಿಗೂ ಈ ಪ್ರಶಸ್ತಿ ಗೌರವ ಸಿಗಲಿದೆ ಎಂದರು.

ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಸಮಾಜಸೇವಕಿ ಡಾ.ಶಕುಂತಲಜಯದೇವ್, ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎಂ.ಎನ್.ಚನ್ನಬಸಪ್ಪ, ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಜಂಟಿ ಕಾರ್ಯದರ್ಶಿ ಪ್ರೊ.ಶಿವಕುಮಾರಯ್ಯ, ಎಚ್.ವಿ.ವೀರಭದ್ರಯ್ಯ, ಕೆ.ಎಚ್.ಶಿವರುದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.

ಇಸ್ರೋ ಕಿರಣ... ಕಿರಣ್ ಕುಮಾರ್ ಪ್ರಶಸ್ತಿಗಳನ್ನು ಎಂದೂ ಹುಡುಕಿಕೊಂಡು ಹೋಗಿಲ್ಲ. ಅವರನ್ನೇ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ಅವರ ಸಾಧನೆ ಗುರುತಿಸಿ ‘ಸಿದ್ದಗಂಗಾ ಶ್ರೀ’ ಪ್ರಶಸ್ತಿಯನ್ನು ಶ್ರೀಮಠದಿಂದ ಕೊಡಲಾಗಿದೆ. ಬಾನಂಗಳದಲ್ಲಿ ಇಸ್ರೋ ಸಂಸ್ಥೆಯ ಮಹತ್ವದ ಸಾಧನೆ ಹಿಂದಿರುವ ಕಿರಣ್ ಕುಮಾರ್ ‘ಇಸ್ರೋ ಕಿರಣ’ ಎಂದು ಸಿದ್ದಲಿಂಗ ಶ್ರೀಗಳು ಮೆಚ್ಚುಗೆಯ ನುಡಿಗಳನ್ನಾಡಿದರು. ಜ.21ಕ್ಕೆ ಹಳೆಯ ವಿದ್ಯಾರ್ಥಿಗಳ ಸಭೆ ಶ್ರೀಮಠಕ್ಕೆ ಬರುವುದು ಹಳೆಯ ವಿದ್ಯಾರ್ಥಿಗಳಿಗೆ ಯಾತ್ರೆ ಆಗಲಿ. ಇನ್ಮುಂದೆ ಪ್ರತೀವರ್ಷ ಜ.21ರಂದು ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನದಂದೇ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವಸದಸ್ಯರ ಸಭೆ ನಡೆಸೋಣ. ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆಯಲ್ಲಿ ಕುಟುಂಬ ಸಮೇತ ನೀವೆಲ್ಲಾ ಭಾಗಿಯಾಗಿ ಮಧ್ಯಾಹ್ನ ಸರ್ವಸದಸ್ಯರ ಸಭೆಯಲ್ಲಿ ಭಾಗಿಯಾಗೋಣ ಎಂದು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಪ್ರಕಟಿಸಿದರು. ಸಿದ್ದಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ ಪೂಜ್ಯ ಶ್ರೀಗಳ ಹೆಸರಿನ ‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿಯನ್ನು ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿ’ಸೋಜಾ, ಹಿರಿಯ ಜನಪ ವಿದ್ವಾಂಸ ಬೆಂಗಳೂರಿನ ಡಾ.ಬಿ.ಎಸ್.ಸ್ವಾಮಿ ಪ್ರದಾನ ಮಾಡಲಾಯಿತು. ಪ್ರಶಸ್ತಿ 15 ಸಾವಿರ ರೂ. ನಗದು ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ಸಂಘಸಿರಿ ಪ್ರಶಸ್ತಿ: ಹಾಸನದ ಸುಶೀಲ ಸೋಮಶೇಖರ್, ಮೈಸೂರಿನ ಡಾ.ವಚನ ಕುಮಾರಸ್ವಾಮಿ, ಬೆಂಗಳೂರಿನ ಉದ್ಯಮಿ ಎ.ನಂಜಪ್ಪ ಅವರ ಪತ್ನಿ ದೇವೀರಮ್ಮ ಮತ್ತು ಪ್ರಗತಿ ಪರ ರೈತ ಹೊಸಕೋಟೆಯ ಟಿ.ಮಂಜುನಾಥ್‌ಗೆ ಸಂಘಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.