ಜಿಲ್ಲೆ

ಜೋಳಿಗೆ ಹಿಡಿದು ಸಿದ್ದಲಿಂಗಶ್ರೀ ಭಿಕ್ಷಾಟನೆ

ತುಮಕೂರು: ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಜೋಳಿಗೆ ಹಿಡಿದು ಎಪಿಎಂಸಿ ಆವರಣದಲ್ಲಿ ಸೋಮವಾರ ಭಿಕ್ಷಾಟನೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತರು, ವರ್ತಕರು ದವಸ, ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ನೀಡಿದರು.

ಫೆ.15ರಿಂದ 24ರವರೆಗೆ ಶ್ರೀಮಠದಲ್ಲಿ ನಡೆಯಲಿರುವ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಗಳು ಭಿಕ್ಷಾಟನೆ ನಡೆಸಿದರು.

ಮೊದಲಿನಿಂದ ಶ್ರೀಮಠದಲ್ಲಿ ನಡೆದುಕೊಂಡು ಬಂದ ಪದ್ಧತಿಯಂತೆ ಭಿಕ್ಷಾಟನೆ ಕೈಗೊಳ್ಳುವುದು ರೂಢಿಯಲ್ಲಿದೆ. ಡಾ.ಶಿವಕುಮಾರ ಸ್ವಾಮೀಜಿ ಅವರೂ ಕೂಡ ಕೊನೆಯ ಕ್ಷಣದವರೆಗೂ ಭಿಕ್ಷಾಟನೆ ನಡೆಸುತ್ತಿದ್ದರು.

ಎಲ್ಲ ಸಂದರ್ಭದಲ್ಲಿಯೂ ಭಕ್ತರು ಮಠಕ್ಕೆ ನೆರವಾಗುತ್ತಿದ್ದಾರೆ, ಶ್ರೀಮಠದ ಮೇಲಿನ ಅನನ್ಯ ಭಕ್ತಿಯಿಂದ ಜಾತ್ರೆಗೆ ಕೈಲಾದ ನೆರವು ನೀಡುತ್ತಿದ್ದಾರೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಎಪಿಎಂಸಿಯಲ್ಲಿ ಭಿಕ್ಷಾಟನೆ ಆರಂಭಿಸಿದ್ದು, ಪ್ರತೀ ವರ್ಷದಂತೆ ಶ್ರೀಮಠಕ್ಕೆ ದಾನ ನೀಡಿ ನಾಡಿನೆಲ್ಲೆಡೆಯಿಂದ ಜಾತ್ರೆಗೆ ಬರುವ ರೈತರು, ಭಕ್ತರಿಗೆ ದಾಸೋಹ ಏರ್ಪಡಿಸಲು ನೆರವಾಗುವಂತೆ ವರ್ತಕರಲ್ಲಿ ಮನವಿ ಮಾಡಿದರು.

ಎಪಿಎಂಸಿ ಕಚೇರಿಯಲ್ಲಿ ಕಾರ್ಯದರ್ಶಿ ಡಿ.ಆರ್.ಪುಷ್ಪಾ, ಸಹಾಯಕ ಕಾರ್ಯದರ್ಶಿ ವೈ.ಎಂ.ಲಕ್ಷ್ಮೀಕಾಂತಯ್ಯ ಮತ್ತು ಸಿಬ್ಬಂದಿ ಶ್ರೀಗಳನ್ನು ಸ್ವಾಗತಿಸಿ, ಆಶೀರ್ವಾದ ಪಡೆದರು.  ಎಪಿಎಂಸಿಯಲ್ಲಿ ಭಕ್ತರಾದ ಶಂಕರ್, ನಂದೀಶ್, ಹನುಮಂತರಾಜು, ಹಿಂಜಾವೇ ಜಿ.ಎಸ್.ಬಸವರಾಜು, ಮಾಜಿ ಎಪಿಎಂಸಿ ಅಧ್ಯಕ್ಷ ಪಂಚಾಕ್ಷರಯ್ಯ, ಮಾಜಿ ಸದಸ್ಯ ಧನಿಯಕುಮಾರ್, ದೀಪಕ್, ಕೋರಿ ಮಂಜಣ್ಣ, ನಂಜುಂಡಪ್ಪ ಮತ್ತಿತರರು ಶ್ರೀಗಳ ಪಾದಪೂಜೆ ನೆರವೇರಿಸಿ ಭಿಕ್ಷೆ ನೀಡಿದರು.

10 ಸಾವಿರ ರೂ. ಚೆಕ್ ನೀಡಿಕೆ: ವರ್ತಕರು ಅಕ್ಕಿ, ರಾಗಿ, ತೊಗರಿಬೇಳೆ, ಬೆಲ್ಲ, ಹುಣಸೆಹಣ್ಣನ್ನು ದಾನವಾಗಿ ನೀಡಿ ಭಕ್ತ ಸಮರ್ಪಿಸಿದರು. 10 ದಿನ ಜಾತ್ರೆ ಸಂದರ್ಭದಲ್ಲಿ ರಾಜ್ಯದೆಲ್ಲೆಡೆಯಿಂದ ಬರುವ ಭಕ್ತರಿಗೆ, ಸಾರ್ವಜನಿಕರಿಗೆ ದಾಸೋಹ ಏರ್ಪಡಿಸಲು ಭಿಕ್ಷಾಟನೆಯಿಂದ ದಾಸ್ತಾನು ಸಂಗ್ರಹಿಸಲಾಗುತ್ತದೆ. ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕಚೇರಿಯಲ್ಲಿ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ, ಕಾರ್ಯದರ್ಶಿ ಬೆಟ್ಟಯ್ಯ ಹಾಗೂ ಸದಸ್ಯರು 10 ಸಾವಿರ ರೂ. ಚೆಕ್ ನೀಡುವ ಮೂಲಕ ಭಕ್ತಿ ಸಮರ್ಪಿಸಿದರು. ಎಸ್‌ಐಟಿ ಮುಖ್ಯರಸ್ತೆ, ಎಸ್‌ಎಸ್‌ಪುರಂ, ಮಂಡಿಪೇಟೆ, ಹೊಸಮಂಡಿಪೇಟೆಯಲ್ಲಿ ಸಿದ್ಧಗಂಗಾ ಶ್ರೀಗಳು ಭಿಕ್ಷಾಟನೆ ಕೈಗೊಳ್ಳುವರು. ಮಠದಲ್ಲಿ ಫೆ.12ರಿಂದ 26ರವರೆಗೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವಿರುತ್ತದೆ.