ಜಿಲ್ಲೆ

ಸಿದ್ಧಗಂಗಾ ಮಠ ಬಡ ಹಾಗೂ ಅನಾಥ ಮಕ್ಕಳ ಪಾಲಿನ ಬೆಳಕು

ಸದೇಶ್ ಕಾರ್ಮಾಡ್

ಮೈಸೂರು: ತುಮಕೂರಿನ ಶ್ರೀ ಸಿದ್ಧಗಂಗಾ ಮಠ ಬಡ ಹಾಗೂ ಅನಾಥ ಮಕ್ಕಳ ಪಾಲಿಗೆ ಬೆಳಕು ಎಂದು ಬೇಬಿಬೆಟ್ಟದ ಶ್ರೀ ರಾಮಯೋಗಿಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಎಂದು ಬಣ್ಣಿಸಿದರು.

ಅಖಿಲ ಕರ್ನಾಟಕ ಪರಮಪೂಜ್ಯ ಡಾ.ಶ್ರೀ ಶಿವರಾತ್ರಿ ಶಿವಕುಮಾರ ಸ್ವಾಮೀಜಿ ಭಕ್ತವಂದ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ‘ದಾಸೋಹ ದಿನ’ ಹಾಗೂ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಶಿವಕುಮಾರಸ್ವಾಮೀಜಿ ಲಕ್ಷಾಂತರ ಮಕ್ಕಳಿಗೆ ತಂದೆಯಾಗಿ, ದೇವರಾಗಿ ಮಾರ್ಗದರ್ಶನ ನೀಡಿದರು. ತಮ್ಮ ಬದುಕನ್ನು ಸಮಾಜಕ್ಕೆ ಸಮರ್ಪಿಸಿಕೊಂಡಿದ್ದರು. ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜನಪದ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ. ವಸಂತ್ ಕುಮಾರ್ ಮಾತನಾಡಿ, ಬಸವಣ್ಣ ಅವರ ವಿಚಾರಗಳನ್ನು, ಆದರ್ಶಗಳನ್ನು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ ಹೃದಯದಲ್ಲಿ ತುಂಬಿಕೊಂಡು ಸಮಾಜ ಸೇವೆ ಮಾಡಿದರು. ಯಾವುದೇ ಜಾತಿ, ಧರ್ಮ ನೋಡದೆ ಮಕ್ಕಳಿಗೆ ಶ್ರೀಗಳು ಶಿಕ್ಷಣ ನೀಡಿದರು ಎಂದು ಸ್ಮರಿಸಿದರು.

ಈ ಸಂದರ್ಭ ಭದ್ರಾವತಿಯ ಬಸವೇಶ್ವರ ಧರ್ಮಸಂಸ್ಥೆ ಸಂಸ್ಥಾಪಕ ಶಿವಕುಮಾರ್, ಪಾಂಡವಪುರದ ಜ್ಞಾನಬಂಧು ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಆರ್. ಕುಮಾರಸ್ವಾಮಿ, ಬೆಂಗಳೂರಿನ ಸಮಾಜಸೇವಕ ಜಿ.ನಾಗೇಶ್ ರಾವ್, ಹಾಸನದ ಕಾರ್ಯಪಾಲಕ ಇಂಜಿನಿಯರ್ ಎಚ್.ವಿ. ನಂಜೇಶಯ್ಯ, ಮೈಸೂರಿನ ಸಮಾಜ ಸೇವಕಿ ನಿಶಾ ಮುಳಗುಂದ ಅವರಿಗೆ ಡಾ.ಶ್ರೀ ಶಿವಕುಮಾರಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ತುಮಕೂರಿನ ಶ್ರೀ ಸಿದ್ದಗಂಗಾಮಠದ ಕಿರಿಯಶ್ರೀ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಶ್ರೀ ಹುಲ್ಲಿನಬೀದಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಶ್ರೀ ಕಲ್ಯಾಣಬಸವೇಶ್ವರ ಮಠ ಶ್ರೀ ಒಂಕಾರೇಶ್ವರ ಸ್ವಾಮೀಜಿ, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಬಸವಮಾರ್ಗ ಫೌಂಡೇಷನ್ ಅಧ್ಯಕ್ಷ ಎಸ್. ಬಸವರಾಜು, ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ. ಶಿವಕುಮಾರ್, ಮಂಡ್ಯ ಲಿಂಗಾಯತ ಮಹಾಸಭೆ ಅಧ್ಯಕ್ಷ ಎಂ.ಎಸ್. ಮಂಜುನಾಥ್, ಡಾ.ಶ್ರೀ ಶಿವರಾತ್ರಿ ಶಿವಕುಮಾರ ಸ್ವಾಮೀಜಿ ಭಕ್ತವಂದ ರಾಜ್ಯಾಧ್ಯಕ್ಷ ಡಾ. ಅಪೇಕ್ಷ ಮಂಜುನಾಥ್, ಗೌರವಾಧ್ಯಕ್ಷ ಡಾ.ನ.ಗಂಗಾಧರಪ್ಪ, ಅಧ್ಯಕ್ಷ ಡಾ.ಆರ್.ಎಸ್. ರಾಜು, ಉಪಾಧ್ಯಕ್ಷ ಶಿವಕುಮಾರ್ ಪಾಟೀಲ್ ತೇಗಂಪೂರ, ಉಪಾಧ್ಯಕ್ಷೆ ಡಾ.ಸ್ವಾತಿ ಬಸಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಎಸ್.ಕೆ. ರಾಮಸ್ವಾಮಿ, ಸಂಘಟನಾ ಕಾರ್ಯದರ್ಶಿ ಡಾ.ಸಿ.ಎಲ್. ಶಿವಮೂರ್ತಿ, ಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ.ನಾಗರಾಜ್ ವಿ.ಬೈರಿ, ಜನಪದ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ. ವಸಂತ್ ಕುಮಾರ್ ಹಾಗೂ ಇತರರು ಇದ್ದರು.