ಜಿಲ್ಲೆ

ಜಿಲ್ಲೆಯಲ್ಲಿಲ್ಲ ಸಿಕಲ್‌ ಸೆಲ್‌ ರೋಗ ಬಾಧೆ

Uttara Kannada - Subash Hegde

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಗೋಲು ಕಾಯಿಲೆಯ ಆತಂಕ ದೂರವಾಗಿದೆ. ಜಿಲ್ಲೆಯಲ್ಲಿ ನಿರ್ದಿಷ್ಟ ಜನಾಂಗಗಳನ್ನು ಗುರಿಯಾಗಿಸಿಕೊಂಡು ಸುಮಾರು 14 ಸಾವಿರಕ್ಕೂ ಅಧಿಕ ಜನರ ರಕ್ತ ತಪಾಸಣೆ ನಡೆಸಲಾಗಿದ್ದು, ಯಾರಲ್ಲೂ ಕಾಯಿಲೆ ಕಂಡುಬಂದಿಲ್ಲ ಎಂದು ಡಿಎಚ್‌ಒ ಡಾ.ನೀರಜ್ ಬಿ.ವಿ.ತಿಳಿಸಿದ್ದಾರೆ.

ರಕ್ತದ ಕಣಗಳು ಕುಡಗೋಲು ಅಥವಾ ಅರ್ಧ ಚಂದ್ರಾಕೃತಿ ಪಡೆದುಕೊಂಡು ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಕಾಯಿಲೆ ಇದಾಗಿದೆ. ಬುಡಕಟ್ಟು ಜನರಲ್ಲಿ ಈ ಆನುವಂಶೀಯ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅದನ್ನು ಗುರುತಿಸಲು ರಾಜ್ಯದಲ್ಲಿ ಬುಡಕಟ್ಟು ಜನಸಂಖ್ಯೆ ಇರುವ 7 ಜಿಲ್ಲೆಗಳಲ್ಲಿ 2023 ರಿಂದ ವಿಶೇಷ ಅಭಿಯಾನ ಹಮ್ಮಿಕೊಂಡಿತ್ತು.

ಕೊಡಗು, ಮೈಸೂರು, ಚಿಕ್ಕಮಗಳೂರು, ಉಡುಪಿ, ಚಾಮರಾಜನರ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ 55,503 ಜನರ ರಕ್ತದ ಮಾದರಿಗಳನ್ನು ತಪಾಸಣೆ ಮಾಡಲು ಗುರಿ ನಿಗದಿ ಮಾಡಲಾಗಿತ್ತು. ಚಾಮರಾಜನಗರದ ಸೋಲಿಗ ಜನಾಂಗದಲ್ಲಿ ಮೊದಲು ಈ ಕಾಯಿಲೆ ಕಾಣಿಸಿಕೊಂಡಿತ್ತು. ಉತ್ತರ ಕನ್ನಡದ ಸಿದ್ದಿ ಸೇರಿ ಇತರ ಜನಾಂಗಗಳಲ್ಲೂ ಕುಡಗೋಲು ಕಾಯಿಲೆಯ ಲಕ್ಷಣ ಇರುವುದರಿಂದ ಅಂಥವರನ್ನು ಗುರುತಿಸಿ ರಕ್ತದ ಮಾದರಿಗಳನ್ನು ತಪಾಸಣೆ ಮಾಡಲು ಸರ್ಕಾರ ಸೂಚನೆ ನೀಡಿತ್ತು. ರೊಗ ಕಂಡುಬಂದಲ್ಲಿ ಅದರ ನಿಯಂತ್ರಣಕ್ಕೆ ಚಿಕಿತ್ಸೆ ಮತ್ತು ರೋಗ ಮುಂದಿನ ಪೀಳಿಗೆಗೆ ಹರಡದಂತೆ ಕ್ರಮ ವಹಿಸಲು ಜಾಗೃತಿ ಮೂಡಿಸುವಂತೆ ಆರೋಗ್ಯ ಇಲಾಖೆಗೆ ಆದೇಶ ಹೊರಡಿಸಲಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಹಳಿಯಾಳ ಸೇರಿ ವಿವಿಧ ತಾಲೂಕುಗಳ 17,119 ಜನರ ರಕ್ತದ ಮಾದರಿಗಳನ್ನು ಪರಿಶೀಲಿಸುವ ಗುರಿ ನೀಡಿದ್ದು, ಇದುವರೆಗೆ ವಿವಿಧೆಡೆ ವಿಶೇಷ ಆರೋಗ್ಯ ಶಿಬಿರಗಳನ್ನು ಮಾಡಿ, 14,989 ಜನರ ರಕ್ತದ ಮಾದರಿಗಳನ್ನು ತಪಾಸಣೆ ಮಾಡಲಾಗಿದೆ. ಇನ್ನೂ 2130 ಜನರ ಆರೋಗ್ಯ ತಪಾಸಣೆ ಬಾಕಿ ಇದೆ. ಇದುವರೆಗೆ ಶೇ.88 ರಷ್ಟು ಜನರ ತಪಾಸಣೆ ನಡೆದರೂ ಯಾರಲ್ಲೂ ಲಕ್ಷಣ ಕಂಡುಬAದಿಲ್ಲ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಏನಿದು ಕುಡಗೋಲು ಕಾಯಿಲೆ..?

ಸಾಮಾನ್ಯವಾಗಿ ಮಾನವನ ಕೆಂಪು ರಕ್ತದ ಕಣಗಳು ಗೋಲಾಕಾರವಾಗಿರುತ್ತವೆ. ಆದರೆ, ಆನುವಂಶೀಯವಾಗಿ ಈ ರೋಗ ಇರುವವರ ರಕ್ತದ ಕಣಗಳು ಕುಡಗೋಲು ಅಥವಾ ಅರ್ಧ ಚಂದ್ರಾಕೃತಿಯಲ್ಲಿ ಕಾಣಿಸುತ್ತವೆ. ಇದರಿಂದಲೇ ಅದಕ್ಕೆ ಕುಡಗೋಲು ಕಾಯಿಲೆ ಅಥವಾ ಇಂಗ್ಲಿಷ್‌ನಲ್ಲಿ ಸಿಕಲ್ ಸೆಲ್ ಅನೀಮಿಯಾ ಎಂದು ಕರೆಯಲಾಗುತ್ತದೆ. ರಕ್ತದ ಕಣಗಳು 120 ದಿನಗಳವರೆಗೂ ಜೀವಂತ ಇರುತ್ತವೆ. ಆದರೆ, ಸಿಕಲ್ ಸೆಲ್ ರೋಗ ಇರುವವರ ರಕ್ತದ ಕಣಗಳು 10 ರಿಂದ 12 ದಿನ ಮಾತ್ರ ಬದುಕುತ್ತವೆ. ಕಾಯಿಲೆ ಇರುವವರ ರಕ್ತದ ಹರಿವಿನಲ್ಲಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ಸ್ನಾಯು, ಕೀಲುಗಳಲ್ಲಿ ಭಾರಿ ನೀವು, ಬಹು ಅಂಗಾಗ ವೈಫಲ್ಯ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೊದಲು ಆಫ್ರಿಕಾದಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಭಾರತದ ವಿವಿಧ ಬುಡಕಟ್ಟು ಜನರಲ್ಲೂ ಕಾಯಿಲೆ ಕಾಣಿಸಿಕೊಂಡಿದೆ. ಈ ಕಾಯಿಲೆ ಇರುವವರನ್ನು ಅದೃಶ್ಯ ಅಂಗವಿಕಲರು ಎಂದು ಗುರುತಿಸಿ, ಅವರಿಗೆ ಮಾಸಾಶನ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಲ್ಲಿ ಈಗಾಗಲೇ ಕಾಯಿಲೆ ಇರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಕುಡಗೋಲು ಕಾಯಿಲೆ ಸಂಬಂಧ ಗುರುತಿಸಲಾದ ಶೇ.88 ರಷ್ಟು ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಯಾರಲ್ಲೂ ಕಾಯಿಲೆ ಇರುವುದು ಖಚಿತವಾಗಿಲ್ಲ. ಬಾಕಿ ಉಳಿದ ಜನರ ರಕ್ತದ ಮಾದರಿ ತಪಾಸಣೆ ಮಾಡಿದ ನಂತರ ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು. ಡಾ.ನೀರಜ್ ಬಿ.ವಿ. ಡಿಎಚ್‌ಒ, ಕಾರವಾರ