ಮಡಿಕೇರಿ: ಕುಡಗೋಲು ಕಣದ ಕಾಯಿಲೆಯನ್ನು ಚಿಕಿತ್ಸೆ ಪಡೆಯಲು ನಿರ್ಲಕ್ಷಿಸಿದಲ್ಲಿ ಜೀವಕ್ಕೆ ಅಪಾಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಮತ್ತು ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ತಾಲೂಕು ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಬುಧವಾರ ನಡೆದ ವಿಶ್ವ ಕುಡಗೋಲು ಕಣ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ೫೮ ಸಾವಿರಕ್ಕೂ ಹೆಚ್ಚು ಗಿರಿಜನರಿದ್ದು, ಕೊಡಗು ಜಿಲ್ಲೆಯಲ್ಲಿ ಆದಿವಾಸಿ ಬುಡಕಟ್ಟು ಜನಾಂಗದ ೧೦,೨೬೩ ಜನರನ್ನು ನೋಂದಣಿ ಮಾಡಿದ್ದಾರೆ. ಇವರಲ್ಲಿ ೧೦,೨೨೪ ಜನರನ್ನು ತಪಾಸಣೆ ಮಾಡಿದ್ದು, ಇವರಲ್ಲಿ ೪೫೩ ಕ್ಯಾರಿಯರ್‌ಗಳು ಕಂಡುಬಂದಿದ್ದು, ೩೪ ಪ್ರಕರಣಗಳು ಕುಡುಗೋಲು ಕಣದ ಕಾಯಿಲೆ ಪ್ರಕರಣಗಳೆಂದು ದೃಢಪಟ್ಟಿರುತ್ತವೆ.
ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಸಂಬಂಧಿಕರಿಗೆ ಈ ಕಾಯಿಲೆ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಿಬ್ಬಂಧಿಯವರಿಂದ ರಕ್ತಪರೀಕ್ಷೆ ಮಾಡಿಸಿ ಪತ್ತೆಹಚ್ಚಬಹುದು. ರೋಗ ಕಂಡುಬಂದಲ್ಲಿ ಎಲ್ಲಾ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರನ್ನು ರಕ್ತಪರೀಕ್ಷೆಗೆ ಒಳಪಡಿಸತಕ್ಕದ್ದು ಎಂದ ಅವರು, ಕುಡಗೋಲು ಕಣದ ಕಾಯಿಲೆಯನ್ನು ಚಿಕಿತ್ಸೆ ಪಡೆಯಲು ನಿರ್ಲಕ್ಷಿಸಿದಲ್ಲಿ ಜೀವಕ್ಕೆ ಅಪಾಯವಾಗಬಹುದು ಎಂದು ಎಚ್ಚರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಶಾಸಕ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಕುಡಗೋಲು ಕಣದ ರೋಗದ ಬಗ್ಗೆ ಸಾರ್ವಜನಿಕರು ಹಾಗೂ ಗಿರಿಜನರು ಅರಿವು ಜಾಗೃತಿ ಹೊಂದಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಗಳ ಸಹಕಾರ ಅತೀ ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಸಿಕಲ್‌ಸೆಲ್ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಆನಂದ್ ಮಾತನಾಡಿ, ಕುಡಗೋಲು ಕಣ ರೋಗವು ಅನುವಂಶಿಕ ಕಾಯಿಲೆಯಾಗಿದೆ. ಇದರಲ್ಲಿ ಕೆಂಪು ರಕ್ತಕಣಗಳು ಕುಡಗೋಲು ಆಕಾರದ ರೂಪವನ್ನು ಪಡೆದು ದೇಹದಲ್ಲಿ ರಕ್ತದ ಚಲನೆಯನ್ನು ನಿಧಾನಗೊಳಿಸಿ, ನಿರ್ಭಂಧಿಸಿ, ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕಾಯಿಲೆಯು ಹುಟ್ಟಿನಿಂದ ಸಾಯುವವರಗೆ ಕಾಡುವ ರೋಗವಾಗಿದ್ದು, ಈ ರೋಗ ಹೊಂದಿದವರ ಜೀವಿತಾವಧಿ ಇನ್ನಿತರ ಜನಸಾಮಾನ್ಯರಿಗಿಂತ ಕಡಿಮೆಯಿದೆ. ಸರಾಸರಿ ೪೨ ರಿಂದ ೪೮ ವರ್ಷ ಬದುಕಬಹುದು ಎಂದು ತಿಳಿಸಿದರು.
ಆಯಾಸ, ಬ್ಯಾಕ್ಟೀರಿಯಾದ ಸೋಂಕುಗಳು, ಪಾರ್ಶ್ವವಾಯು, ಕಣ್ಣಿನ ಹಾನಿ, ಉರಿಯೂತ, ವಾಸಿಯಾಗದ ಕಾಲಿನ ಹುಣ್ಣು, ತೀವ್ರ ಮೂಳೆನೋವು, ಪದೇಪದೇ ಜ್ವರ, ರಕ್ತಹೀನತೆ, ವಿಳಂಬಿತ ಬೆಳವಣಿಗೆ ಅಥವಾ ಪ್ರೌಢಾವಸ್ಥೆ ಈ ಕಾಯಿಲೆಯ ಲಕ್ಷಣಗಳು ಎಂದು ತಿಳಿಸಿದರು.
ಗಿರಿಜನ ಅಭಿವೃದ್ಧಿ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ೫೮ ಸಾವಿರಕ್ಕೂ ಹೆಚ್ಚಿನ ಗಿರಿಜನರಿದ್ದು, ಇವರುಗಳಿಗೆ ಕುಡಗೋಲು ಕಣ ರೋಗ ತಪಾಸಣೆ ಮಾಡಿಸಿಕೊಳ್ಳಲು ಸಹಕರಿಸಲು ಗಿರಿಜನ ಮುಖಂಡರಲ್ಲಿ ಮನವಿ ಮಾಡಿದರು. ಇಲಾಖೆ ವತಿಯಿಂದ ಗಿರಿಜನರ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಸಭೆಗೆ ಆಗಮಿಸಿದ್ದ ಗಿರಿಜನ ಸಮುದಾಯದ ಮುಖಂಡರಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಂಕಜಾ, ವನಬನ ವಿಕಾಸ ಕೇಂದ್ರ ಹಾಗೂ ಲ್ಯಾಂಪ್ ನಿರ್ದೇಶಕಿ ಜೆ.ಆರ್.ಪುಷ್ಪ, ಗಿರಿಜನ ಮುಖಂಡರಾದ ರಾಜೀವ್, ನಿತಿನ್ ಸಭೆಯಲ್ಲಿ ಕುಡಗೋಲು ಕಣ ರೋಗ ತಪಾಸಣೆಗೆ ಸಮುದಾಯದಿಂದ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಕೆ.ಜಿ.ವಿಮಲ, ಜಿಲ್ಲೆಯಲ್ಲಿ ವಿಕಲಚೇತನರ ದೃಢೀಕರಣಕ್ಕೆ ಹಾಗೂ ಇಲಾಖೆ ವತಿಯಿಂದ ಲಭಿಸುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಪ್ರಾಜೆಕ್ಟ್ ಚಂದನ ಭಾರತೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಸಂಯೋಜಕ ಡಾ.ಕಾವೇರಿ ಮಾತನಾಡಿ, ೫ ವರ್ಷದಿಂದ ೪೫ ವರ್ಷದೊಳಗಿನ ಎಲ್ಲಾ ಗಿರಿಜನರು ತಪ್ಪದೇ ಕುಡುಗೋಲು ಕಣರೋಗದ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಾರಂಭದಲ್ಲಿಯೇ ರೋಗ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್, ಆರ್ಜಿ ಗ್ರಾ.ಪಂ.ಅಧ್ಯಕ್ಷೆ ಫಾತೀಮಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಗೂ ೫೦ ಜನ ಗಿರಿಜನ ಮುಖಂಡರು ಸೇರಿದಂತೆ ಇತರರು ಇದ್ದರು.