ಸರಗೂರು: ತಾಲೂಕಿನ ಕಾಟವಾಳು ಹಾಡಿಯಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು, ಸಂಶೋಧನಾ ಸಂಸ್ಥೆ, ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಬಿ.ಮಟಕೆರೆಪುರ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಮಂಗಳವಾರ ವೈದ್ಯರ ದಿನಾಚರಣೆ ಹಾಗೂ ಮತ್ತು ಸಿಕಲ್‌ಸೆಲ್ ಅನೀಮಿಯ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಜು.1ರಂದು ಬಿ.ಸಿ.ರಾಯ್ ಅವರ ಜನ್ಮ ದಿನವನ್ನು ವೈದ್ಯರ ದಿನವಾಗಿ ಆಚರಣೆ ಮಾಡುತ್ತಿದ್ದೆವೆ. ಬಿ.ಸಿ.ರಾಯ್ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಸಿಕಲ್‌ಸೆಲ್ ಅನೀಮಿಯ ಕಾಯಿಲೆ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಒಂದು ಅನುವಂಶಿಕ ಕಾಯಿಲೆ. ಆದರೂ ಆರೋಗ್ಯವಂತ ಪಾಲಕರಿಗೆ ಸಿಕಲ್‌ಸೆಲ್ ಕಾಯಿಲೆ ಇರುವ ಮಕ್ಕಳು ಹುಟ್ಟಬಹುದು. ಇದರ ಲಕ್ಷಣ ಪದೇಪದೆ ಜ್ವರ, ತೀವ್ರ ಮೂಳೆ ನೋವು, ತೀವ್ರ ಹೊಟ್ಟೆ ನೋವು, ಆಗಾಗ ಕಾಮಲೆ ರೋಗ, ರಕ್ತ ಹೀನತೆ, ವಾಸಿಯಾಗದ ಹುಣ್ಣುಗಳು, ಲಕ್ವಾ ಕಂಡುಬರುತ್ತವೆ ಎಂದು ಹೇಳಿದರು.
ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಸಂಬಂಧಿಕರಿಗೆ ಸಿಕಲ್ ಸೆಲ್ ಕಾಯಿಲೆ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಿಬ್ಬಂದಿ ಅವರಿಂದ ರಕ್ತ ಪರೀಕ್ಷೆ ಮಾಡಿಸಿ ಪತ್ತೆ ಹಚ್ಚಬಹುದು. ಮಕ್ಕಳಿಗೆ ಸಿಕಲ್ ಸೆಲ್ ಕಾಯಿಲೆ ಇದೆ ಎಂದು ದೃಢಪಟ್ಟಲ್ಲಿ ಚಿಕಿತ್ಸೆ ನೀಡಿ ಆರೋಗ್ಯ ಕಾಪಾಡಬಹುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶೈಲೇಂದ್ರ, ವೈದ್ಯಾಧಿಕಾರಿಗಳಾದ ಡಾ. ಅಖಿಲಾ, ಗಂಗಾಧರ್, ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಚಾಲಕಿ ಪೂಜಾ, ನಾಗರಾಜು, ಸಿದ್ದರಾಜು, ಪುಟ್ಟ ಬಸಯ್ಯ, ಹಾಡಿಯ ಮುಖಂಡರು, ಶಾಲೆಯ ಶಿಕ್ಷಕರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಶಾಲೆಯ ಮಕ್ಕಳು, ಹಾಡಿಯ ಜನರು ಇದ್ದರು.