ಜಿಲ್ಲೆ

ಅಸ್ವಸ್ಥಗೊಂಡಿದ್ದ ಕೂಲಿ ಕಾರ್ಮಿಕ ಮೃತ್ಯು

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ರಾತ್ರಿ ವೇಳೆ ಮಲಗಿದಲ್ಲಿಂದ ಎದ್ದು ಹೋಗಿ ಮನೆಯ ಸಮೀಪದ ಗುಡ್ಡೆಯಲ್ಲಿ ಗಿಡಗಂಟಿಗಳ ನಡುವೆ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದ ಕೂಲಿ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಆರ್ಯಾಪು ಗ್ರಾಮದ ಕೂರೇಲು ಎಂಬಲ್ಲಿ ನಡೆದಿದೆ.

ಆರ್ಯಾಪು ಗ್ರಾಮದ ಕೂರೇಲು ನಿವಾಸಿ, ಕೂಲಿ ಕಾರ್ಮಿಕ ನಾರಾಯಣ ಗೌಡ(60) ಮೃತಪಟ್ಟವರು. ಮಂಗಳವಾರ ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದ ನಾರಾಯಣ ಗೌಡ ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದವರು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಅವರು ಮನೆಯ ಸಮೀಪ ಗಿಡಗಂಟಿಗಳ ನಡುವೆ ಸಿಲುಕಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದು ಕಂಡು ಬಂದಿತ್ತು. ಕೂಡಲೇ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.