ಕನಕಗಿರಿ ತಾಲೂಕಿನ ಅಡವಿಬಾವಿ ಗ್ರಾಮದ ಗುಡ್ಡದ ಪ್ರದೇಶದಲ್ಲಿ ಗಾಯಗೊಂಡು ಬಿದ್ದಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆಗಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಿದರು. ವಲಯ ಅರಣ್ಯಾಧಿಕಾರಿ ಸುಭಾಷ್‌ಚಂದ್ರ ನಾಯಕ, ಅರವಳಿಕೆ ತಜ್ಞೆ ಡಾ.ಪ್ರಕೃತಿ, ಸಿಬ್ಬಂದಿ ಇತರರಿದ್ದರು. 
ಜಿಲ್ಲೆ

ಅನಾರೋಗ್ಯಕ್ಕೆ ತುತ್ತಾದ ಕರಡಿ ಸೆರೆ

ಗಾಯತ್ರಿ ಮಾಲಿಪಾಟೀಲ್

ಕನಕಗಿರಿ: ತಾಲೂಕಿನ ಅಡವಿಬಾವಿ ಗ್ರಾಮ ಸಮೀಪದ ಗುಡ್ಡದಲ್ಲಿ ಅನಾರೋಗ್ಯದಿಂದ ಓಡಾಡಲು ಕಷ್ಟಪಡುತ್ತಿದ್ದ ಮೂರು ವರ್ಷದ ಹೆಣ್ಣು ಕರಡಿಯನ್ನು ಅರಣ್ಯಇಲಾಖೆ ಸಿಬ್ಬಂದಿ ಶನಿವಾರ ಸೆರೆಹಿಡಿದು ಚಿಕಿತ್ಸೆಗಾಗಿ ಕಮಲಾಪುರ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಿದ್ದಾರೆ.

ಅಡವಿಬಾವಿ, ಚಿಕ್ಕತಾಂಡಾ, ದೊಡ್ಡತಾಂಡಾ, ಸೋಮಸಾಗರದ ಬಳಿ ಗುಡ್ಡಗಾಡು ಇದ್ದು, ಅಲ್ಲಿನ ರೈತರು ದ್ರಾಕ್ಷಿ, ಕಲ್ಲಂಗಡಿ ಸೇರಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯುವುದರಿಂದ ಈ ಭಾಗದಲ್ಲಿ ಕರಡಿಗಳು ವಾಸಿಸುತ್ತವೆ. ಕರಡಿ ಗುಡ್ಡಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದೆ. ಮುಂಗಾಲುಗಳು ನಡೆಯಲು ಬಾರದಷ್ಟು ಶಕ್ತಿ ಕಳೆದುಕೊಂಡಿದ್ದು, ಇದನ್ನು ಗಮನಿಸಿದ ರೈತ ಅರಣ್ಯಇಲಾಖೆ ಗಮನಕ್ಕೆ ತಂದಿದ್ದಾನೆ. ಕಮಲಾಪುರ ಪ್ರಾಣಿ ಸಂಗ್ರಹಾಲಯದ ಅರವಳಿಕೆ ತಜ್ಞೆ ಡಾ.ಪ್ರಕೃತಿ ಅವರು ಶನಿವಾರ ಸ್ಥಳಕ್ಕೆ ಭೇಟಿನೀಡಿ ಕರಡಿಗೆ ಅರವಳಿಕೆ ಮದ್ದು ನೀಡಿ ಸೆರೆಹಿಡಿದು ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಿದ್ದಾರೆ. ಸಾರ್ವಜನಿಕರ ನಿಯಂತ್ರಣಕ್ಕಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ವಲಯ ಅರಣ್ಯಾಧಿಕಾರಿ ಸುಭಾಷ್‌ಚಂದ್ರ ನಾಯಕ, ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸ, ಚಂದ್ರಶೇಖರ ರಾಠೋಡ್, ಗುಂಡಪ್ಪ ಲಮಾಣಿ, ಉಮೇಶ್ವರ, ಗಸ್ತು ಅರಣ್ಯ ಪಾಲಕರಾದ ಶಿವಕುಮಾರ ವಾಲಿ, ದಾವಲ್‌ಸಾಬ್, ಬಸವರಾಜ, ಗ್ಯಾನನಗೌಡ, ಮಂಜುನಾಥ, ಶಿವಾನಂದ, ಅರಣ್ಯ ವೀಕ್ಷಕ ಈರಪ್ಪ ಹಾದಿಮನಿ ಇತರರಿದ್ದರು.