ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ, ಬೆಳ್ಳಿಮಹೋತ್ಸವ ಆಚರಣಾ ಸಮಿತಿ, ಬೆಳ್ಳಿ ಮಹೋತ್ಸವ ಕ್ರೀಡಾ ಸಮಿತಿ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆದರ್ಶ್ ಅದ್ಕಲೇಗಾರ್, ನವೀನ್ ಡಿಸೋಜ ಚಾಂಪಿಯನ್ನಾಗಿ ಹೊರಹೊಮ್ಮಿದರು.
ಸಿಂಗಲ್ಸ್ ವಿಭಾಗದಲ್ಲಿ ೧೬ ತಂಡಗಳು ಭಾಗವಹಿಸಿದ್ದರೆ, ಡಬಲ್ಸ್‌ನಲ್ಲಿ ೧೦ ತಂಡಗಳು ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ ಸೆಮಿಫೈನಲ್ಸ್ ಹಂತಕ್ಕೆ ಸಿಂಗಲ್ಸ್ ವಿಭಾಗದಲ್ಲಿ ಆದರ್ಶ್ ಅದ್ಕಲೇಗಾರ್, ನವೀನ್ ಡಿಸೋಜ, ಲೋಕೇಶ್ ಕಾಟಕೇರಿ, ವಿನು ಕುಶಾಲಪ್ಪ ಅರ್ಹತೆ ಪಡೆದುಕೊಂಡರು. ಡಬಲ್ಸ್ ವಿಭಾಗದಲ್ಲಿ ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜ, ಲೋಕೇಶ್ ಕಾಟಕೇರಿ-ವಿನು ಕುಶಾಲಪ್ಪ, ವಿನೋದ್-ಸುಬ್ರಮಣಿ, ಪ್ರಜ್ವಲ್-ಇಸ್ಮಾಯಿಲ್ ಕಂಡಕೆರೆ ತಂಡ ಪ್ರವೇಶ ಪಡೆಯಿತು.
ಸಿಂಗಲ್ಸ್ ವಿಭಾಗದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿನುಕುಶಾಲಪ್ಪರನ್ನು ಲೋಕೇಶ್ ಕಾಟಕೇರಿ ಮಣಿಸಿ ಫೈನಲ್ ಪ್ರವೇಶಿಸಿದರೆ, ನವೀನ್ ಡಿಸೊಜರನ್ನು ಆದರ್ಶ್ ಅದ್ಕಲೇಗಾರ್ ಮಣಿಸಿ ಫೈನಲ್ ಪ್ರವೇಶಿಸಿದರು. ಫೈನಲ್ ಪಂದ್ಯದಲ್ಲಿ ಲೋಕೇಶ್‌ರನ್ನು ಆದರ್ಶ್ ಅದ್ಕಲೇಗಾರ್ ೩೦-೨೧ ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ವಿನುಕುಶಾಲಪ್ಪರನ್ನು ನವೀನ್ ಡಿಸೋಜ ೨೧-೬ ಅಂಕಗಳಿಂದ ಮಣಿಸಿದರು.
ಡಬಲ್ಸ್ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿನೋದ್-ಸುಬ್ರಮಣಿ ತಂಡವನ್ನು ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜ ತಂಡ ೩೦-೧೧ ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದರೆ, ದ್ವಿತೀಯ ಸೆಮಿಫೈನಲ್‌ನಲ್ಲಿ ಪ್ರಜ್ವಲ್-ಇಸ್ಮಾಯಿಲ್ ಕಂಡಕೆರೆ ತಂಡವನ್ನು ಲೋಕೇಶ್ ಕಾಟಕೇರಿ-ವಿನು ಕುಶಾಲಪ್ಪ ೩೦-೨೧ ಅಂಕಗಳಿಂದ ಮಣಿಸಿದರು. ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪ್ರಜ್ವಲ್-ಇಸ್ಮಾಯಿಲ್ ಕಂಡಕೆರೆ ತಂಡವನ್ನು ವಿನೋದ್-ಸುಬ್ರಮಣಿ ತಂಡ ೧೬-೩೦ ಅಂಕಗಳಿಂದ ಮಣಿಸಿತು.
ಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜ ತಂಡ ಲೋಕೇಶ್ ಕಾಟಕೇರಿ-ವಿನು ಕುಶಾಲಪ್ಪ ತಂಡವನ್ನು ೨-೧ ಸೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ತಾತಪಂಡ ಜ್ಯೋತಿ ಸೋಮಯ್ಯ ಮಹಿಳಾ ಆಟಗಾರ್ತಿಗೆ ನೀಡಿದ ಬಹುಮಾನವನ್ನು ಬಿ.ಆರ್.ಸವಿತಾ ರೈ ಪಡೆದುಕೊಂಡರು.