ಹಳಿಯಾಳ: ಪ್ರಸಕ್ತ ವರ್ಷದ ಕಬ್ಬಿಗೆ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕಾ ಆಡಳಿತ ಸೌಧದ ಆವರಣದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರ ರೈತರ ಅಹೋರಾತ್ರಿ ಹೋರಾಟ ಎರಡನೇ ದಿನ ಕಳೆದರು ಸಹಿತ ಕಾರ್ಖಾನೆಯಿಂದ ಸರಿಯಾದ ಸ್ಪಂದನೆ ದೊರಕದೆ ಇರುವುದಕ್ಕೆ ಹೋರಾಟ ಮುಂದುವರಿದಿದೆ.
ಗುರುವಾರ ಹೋರಾಟ ಆರಂಭವಾದ ಸಂದರ್ಭದಲ್ಲಿ ಸಾಯಂಕಾಲ ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಕಾರ್ಖಾನೆ ಮತ್ತು ರೈತರ ಸಭೆ ನಡೆದು ಸಭೆ ಫಲಪ್ರದವಾಗದೆ ಸಭೆ ಮುರಿದು ಬಿದ್ದಿತ್ತು. ಶುಕ್ರವಾರ ಸಾಯಂಕಾಲ ಮತ್ತೇ ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ಸಭೆ ನಡೆದು ಪ್ರತಿಟನ್ ಕಬ್ಬಿಗೆ ಕೇವಲ 20 ರೂ. ಹೆಚ್ಚಿಸಿದ್ದು 3120 ರೂ. ದರ ನೀಡುವ ಘೋಷಣೆ ಮಾಡಿದ್ದನ್ನು ರೈತರು ನೇರವಾಗಿಯೇ ವಿರೋಧಿಸಿ ತಾವು ಭಿಕ್ಷೆ ಬೇಡಲು ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಮಾತನಾಡಿ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ರೈತರಿಂದ ಕಡಿತ ಮಾಡಿಕೊಂಡಿರುವ ಪ್ರತಿ ಟನ್ ಕಬ್ಬಿಗೆ 256 ರೂ. ನಂತೆ 26 ಕೋಟಿ ರೂ. ಬಾಕಿ ಬಿಲ್ ರೈತರಿಗೆ ಪಾವತಿಸುವ ಸಕ್ಕರೆ ಆಯುಕ್ತರ ಆದೇಶಕ್ಕೆ ತಡೆ ನೀಡುವಂತೆ ಆಗ್ರಹಿಸಿ ಕಾರ್ಖಾನೆಯವರು ಈಗಾಗಲೇ ನ್ಯಾಯಾಲಯದ ಮೊರೆ ಹೊಗಿದ್ದು ಅದು ಅಲ್ಲಿ ಯಾಗ ತೀರ್ಪು ಬರುತ್ತೆ ಅದನ್ನು ತಾವು ಸ್ವಾಗತಿಸುತ್ತೇವೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ರೈತರು ಸಜ್ಜಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ದರದಲ್ಲಿ ಒಂದು ಪೈಸೆ ಕೂಡ ಇಟ್ಟುಕೊಳ್ಳುವ ಅಧಿಕಾರ ಸಕ್ಕರೆ ಕಾರ್ಖಾನೆಗಳಿಗಿಲ್ಲ ಮತ್ತು ಈ ದರದ ಪ್ರತಿಯೊಂದು ಪೈಸೆಯ ಖರ್ಚಿನ ಬಗ್ಗೆಯೂ
ತಿಳಿದುಕೊಳ್ಳುವ ಅಧಿಕಾರ ರೈತರಿಗೆ ಇದೆ ಎಂದರು.
ತಮ್ಮ ಕಟಾವು ಗ್ಯಾಂಗ್ ಗಳನ್ನು ಹಾಕಬೇಡಿ. ಎಫ್ ಆರ್ ಪಿ 4000 ನಮಗೆ ಕೊಡಿ ನೇರವಾಗಿ ನಾವೆ ಕಬ್ಬು ಕಾರ್ಖಾನೆ ಗೇಟಿಗೆ ತಂದು ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಅಸುರ ಸೇನೆ ರಾಜ್ಯ ಅಧ್ಯಕ್ಷ ಚೂನಪ್ಪಾ ಪೂಜಾರಿ ಮಾತನಾಡಿ ವರ್ಷದ ಬೆಳೆಯಾಗಿದ್ದು, ಬೆಳೆ ಬೆಳೆಯುವ ಖರ್ಚು ವೆಚ್ಚ ದುಪ್ಪಟ್ಟಾಗಿದೆ ಕಾರ್ಖಾನೆಯವರು ಕಬ್ಬಿನಿಂದ ತಯಾರಿಸುವ ಸಕ್ಕರೆ ಹೊರತು ಪಡಿಸಿ
ಉಪ ಉತ್ಪನ್ನಗಳ ಲಾಭ ಯಾಕೆ ರೈತರಿಗೆ ಕೊಡುತ್ತಿಲ್ಲ ? ನಿಯಮದಂತೆ ಉಪ ಉತ್ಪನ್ನಗಳ ಲಾಭಾಂಶ ರೈತರಿಗೆ ಕೊಡಬೇಕು ಅದ್ಯಾಕೆ ಕೊಡುತ್ತಿಲ್ಲ ? ಮತ್ತು ಕಟಾವು ಮತ್ತು ಸಾಗಾಣಿಕೆ(ಎಚ್ ಆ್ಯಂಡ್ ಟಿ) ವೆಚ್ಚ ರಾಜ್ಯದಲ್ಲಿಯೇ ಅತಿ ಹೆಚ್ಚು ಮಾಡಿ ಗೊಂದಲ ಉಂಟು ಮಾಡುವುದೇ ಈ ಪ್ಯಾರಿ ಕಾರ್ಖಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಕಳೆದ ವರ್ಷದ ಎಚ್ ಎನ್ ಟಿ ಗೆ ಹೋಲಿಸಿದರು ಕೇವಲ 13 ರೂ. ಹೆಚ್ಚಿಗೆ ಕೊಡುತ್ತಿರುವುದು ಇದು ರೈತರಿಗೆ ಮಾಡಿದ ಮಹಾ ಮೋಸ ಮಾಡಲಾಗುತ್ತಿದೆ. ಎಚ್ ಆ್ಯಂಡ್ ಟಿ ಹೆಸರಲ್ಲಿ ರೈತರಿಗೆ ಶೋಷಣೆ , ಸುಲಿಗೆ ಮಾಡುತ್ತಿದೆ. ಲಗಾಣಿ ಎನ್ನುವುದು ಪ್ರಾರಂಭ ಆಗಿದ್ದೇ ಇಐಡಿ ಪ್ಯಾರಿಯಿಂದ ನೀವು ಹಳಿಯಾಳ ಮಾತ್ರವಲ್ಲ ಕರ್ನಾಟಕ ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದ್ದೀರಿ ಎಂದು ಕೀಡಿ ಕಾರಿದರು.
ರೈತರಲ್ಲಿ ಒಡೆದು ಆಳುವ ನೀತಿ ಅನುಸರಿಸಿದರೇ ನಾವು ಸುಮ್ಮನಿರುವುದಿಲ್ಲ ಎಂದು ರೈತರು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಭಾಗದ ರೈತ ಹೋರಾಟಗಾರ ಸಮರ್ಥ ಪಾಟೀಲ್, ಪ್ರಕಾಶ ನಾಯಕ, ಹಳಿಯಾಳ ಭಾಗದ ಶಂಕರ ಕಾಜಗಾರ, ಪ್ರಕಾಶ ಫಾಕ್ರಿ, ಸುರೇಶ ಶಿವಣ್ಣವರ, ಅಶೋಕ ಮೇಟಿ ಇತರರು ಇದ್ದರು.