ಜಿಲ್ಲೆ

ಹೊಸಸಂಚಲನ ಸೃಷ್ಟಿಸಲಿ ‘ಶೂದ್ರ ಶಿವ’ ನಾಟಕ: ಮಾಜಿ ಸಚಿವ ಜನಾರ್ದನ ಪೂಜಾರಿ

Dakshina Kannada

ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶಗಳನ್ನೊಳಗೊಂಡ ವಿದು ಉಚ್ಚಿಲ್ ನಿರ್ದೇಶನದ ‘ಶೂದ್ರ ಶಿವ’ ನಾಟಕ ರಂಗಭೂಮಿಯಲ್ಲಿ ಹೊಸ ಸಂಚಲನ ಸೃಷ್ಟಿಸಿ, ಯಶಸ್ವಿ ಪ್ರದರ್ಶನವಾಗಲಿ ಎಂದು ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ರುದ್ರ ಥಿಯೇಟರ್ ಮಂಗಳೂರು ವತಿಯಿಂದ ನಿರ್ಮಾಣವಾಗಲಿರುವ ನೂತನ ರಂಗ ಪ್ರಯೋಗ ‘ಶೂದ್ರ ಶಿವ’ ಶಿರ್ಷಿಕೆ ಅನಾವರಣಗೊಳಿಸಿ ಮಾತನಾಡಿದರು.

ದಾರ್ಶನಿಕ, ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರು ಜೀವನಾಧಾರಿತ ಘಟನೆಗಳನ್ನು ಅಧ್ಯಯನ ರಂಗಭೂಮಿಯಲ್ಲಿ ಪ್ರದರ್ಶನದ ಸಾಹಸ ನಿಜಕ್ಕೂ ಶ್ಲಾಘನೀಯವಾದುದು. ಪ್ರಸ್ತುತ ಕಾಲಘಟ್ಟದಲ್ಲಿ ಗುರುಗಳ ತತ್ವ, ಆದರ್ಶಗಳನ್ನು ಮನೆ-ಮನಗಳನ್ನು ಮುಟ್ಟಬೇಕಾಗಿದೆ. ಆ ನಿಟ್ಟಿನಲ್ಲಿ ಶೂದ್ರ ಶಿವ ಸಾರ್ಥಕ್ಯ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ ರಂಗ ಚಾಲನೆ ನೀಡಿದರು. ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಉಪಸ್ಥಿತರಿದ್ದರು. ಮನೋಜ್ ವಾಮಂಜೂರು ಸ್ವಾಗತಿಸಿದರು. ಜರ್ನಿ ಥಿಯೇಟರ್ ಗ್ರೂಪ್ ಕಲಾವಿದರು ನಾಡಗೀತೆ ಹಾಡಿದರು.

ವಿದ್ಯಾರ್ಥಿವೇತನ ವಿತರಣೆ ಮಂಗಳೂರು ಅಸೋಸಿಯೇಶನ್ ಸೌದಿ ಅರೇಬಿಯಾ ಹಾಗೂ ಗುರು ಬೆಳದಿಂಗಳು ಕುದ್ರೋಳಿ ಸಹಯೋಗದೊಂದಿಗೆ ಆಶಕ್ತರಿಗೆ ಸಹಾಯಧನ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನಡೆಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಜರ್ನಿ ಥಿಯೇಟರ್ ಗ್ರೂಪ್ ಮಂಗಳೂರು ವತಿಯಿಂದ ರಂಗ ಸಂಗೀತ ನಡೆಯಿತು.