ಜಿಲ್ಲೆ

ಶುದ್ಧ ಕುಡಿಯುವ ನೀರು ಪೂರೈಸಲು ನಿರ್ವಹಣಾ ಏಜೆನ್ಸಿಗಳ ಸಭೆ ನಡೆಸಿ: ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ಬಸಪ್ಪ ಸೂಚನೆ

ರಾಮನಗರ: ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮತ್ತು ನೀರು ಪೂರೈಕೆ ಸಲುವಾಗಿ ಕೂಡಲೇ ಆಯಾ ಭಾಗದ ಜಿಪಂ ಸದಸ್ಯರು ಮತ್ತು ಘಟಕಗಳನ್ನು ನಿರ್ವಹಣೆ ಹೊಣೆ ಹೊತ್ತಿರುವ ಏಜೆನ್ಸಿಗಳ ಸಭೆಯನ್ನು ಕೂಡಲೇ ನಡೆಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಬಸಪ್ಪ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ 16ನೇ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಕುಡಿಯುವ ನೀರಿನ ಘಟಕಗಳಲ್ಲಿ ತೊಂದರೆ/ದೋಷ ಕಂಡು ಬಂದ ವೇಳೆ ಸಾರ್ವಜನಿಕರೇ ನೇರವಾಗಿ ಘಟಕ ನಿರ್ವಹಿಸುವ ಏಜೆನ್ಸಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಲು ಅನುವಾಗುವಂತೆ ಆಯಾ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಂಬಂಧಪಟ್ಟವರ ದೂರವಾಣಿ/ಮೊಬೈಲ್ ಸಂಖ್ಯೆ ಸೇರಿ ಟೋಲ್ ಫ್ರೀ ಸಂಖ್ಯೆಗಳನ್ನು ಪ್ರದರ್ಶಿಸುವಂತೆ ತಿಳಿಸಿದರು.

ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾದಲ್ಲಿ ಬೋರ್‌ವೆಲ್ ಕೊರೆಸಬಹುದಾ ಎಂದು ಜಿಪಂ ಸದಸ್ಯರು

ಸಭೆಯ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಜಿಪಂ ಸಿಇಒ ಇಕ್ರಂ, ತಾಲೂಕು ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿಗಳಿದ್ದು, ಆಯಾ ತಾಲೂಕಿನ ಶಾಸಕರು, ತಹಸೀಲ್ದಾರ್ ಹಾಗೂ ತಾಪಂ ಇಒ ಒಳಗೊಂಡ ಸಮಿತಿ ಇದೆ. ಸಮಿತಿ ಅನುಮೋದನೆ ಪಡೆದು,

ಹೊಸ ಬೋರ್‌ವೆಲ್ ಕೊರೆಸಬಹುದು. ರಾಮನಗರ ಹಾಗೂ ಕನಕಪುರ ತಾಲೂಕುಗಳನ್ನು ಬರಪೀಡಿತ ಎಂದು ಪರಿಗಣಿಸಲಾಗಿದ್ದು, ಈ ತಾಲೂಕಿನ ಟಾಸ್ಕ್‌ಫೋರ್ಸ್ ಸಮಿತಿಗೆ ತಲಾ 50 ಲಕ್ಷ ರೂ. ಹಾಗೂ ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕುಗಳಿಗೆ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಈಗಾಗಲೇ ಮಾಗಡಿ ತಾಲೂಕನ್ನು ಸಹ ಬರಪೀಡಿತ ಎಂದು ಪರಿಗಣಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಅನುದಾನ ಬಿಡುಗಡೆ ಸರ್ಕಾರಕ್ಕೆ ಪತ್ರ ಬರೆಯಲು ಮನವಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 4 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಈ ಹಾಸ್ಟೆಲ್‌ಗಳ ನಿರ್ಮಾಣ ಮಾಡಲು ಸ್ಥಳ ಇದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಜಿಪಂ ಸದಸ್ಯರು ಅಧ್ಯಕ್ಷರಿಗೆ ಮನವಿ ಮಾಡಿದರು.

ಜಿಪಂ ಅಭಿವೃದ್ಧಿ ಅನುದಾನದಲ್ಲಿ ಜಿಲ್ಲಾ ಮಟ್ಟದಲ್ಲಿ ಅಂಬವಿಕಲರಿಗೆ ಶೇ.5ರಷ್ಟು ಅನುದಾನ ವೆಚ್ಚ ಮಾಡಬೇಕಿದೆ. 2019-20ನೇ ಸಾಲಿನಲ್ಲಿ ರಾಮನಗರ ತಾಲೂಕಿಗೆ 4.64 ಲಕ್ಷ ರೂ. ಅನುದಾನ ನಿಗದಿಯಾಗಿದ್ದು, ಇದರಲ್ಲಿ ಅಂಗವಿಕಲರಿಗೆ 5 ವಾಹನ, ಕನಕಪುರ ತಾಲೂಕಿಗೆ 9.44 ಲಕ್ಷ ರೂ. ನಿಗದಿಯಾಗಿದ್ದು, ಇದರಲ್ಲಿ 10 ವಾಹನ, ಮಾಗಡಿ ತಾಲೂಕಿಗೆ 5.42 ಲಕ್ಷ ರೂ. ಅನುದಾನ ನಿಗದಿಯಾಗಿದ್ದು, ಇದರಲ್ಲಿ 1 ವಾಹನ, ಚನ್ನಪಟ್ಟಣ ತಾಲೂಕಿಗೆ 5.47 ಲಕ್ಷ ರೂ. ಅನುದಾನ ನಿಗದಿಯಾಗಿದ್ದು, ಅಂಗವಿಕಲರಿಗೆ ಬೇಕಿರುವ ರ‌್ಯಾಂಪ್ ಹಾಗೂ ಇತರ ಕಾಮಗಾರಿಗಳನ್ನು ನಿರ್ಮಿಸಲಾಗುವುದು ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಉಷಾ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶಂಕರ್, ಪ್ರಸನ್ನ ಕುಮಾರ್,

ನಾಗರತ್ನ, ಉಪಕಾರ್ಯದರ್ಶಿ ಉಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿ ಮಂಗಳವಾರ ಪ್ರಗತಿ ಪರಿಶೀಲನೆ: ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರತಿ ಮಂಗಳವಾರ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಶೇ.95ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಬಿಲ್‌ಗಳನ್ನು ಸಹ ನಿಗದಿತ ಅವಧಿಯಲ್ಲಿ ಪಾವತಿಸಿ ಗುರಿ ಸಾಧಿಸಲಾಗುವುದು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಲ್ಲಿ ತಕ್ಷಣವೇ ಸ್ಪಂದಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಇಕ್ರಂ ತಿಳಿಸಿದರು. ಜಿಪಂ ಸದಸ್ಯರು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆಗೆ ಸ್ಪಂದಿಸಲು ಇಂದಿನಿಂದಲೇ ಸಜ್ಜಾಗಬೇಕು. ಹೊಸ ಬೋರ್‌ವೆಲ್ ಕೊರೆಸಬೇಕಾದ ಪರಿಸ್ಥಿತಿ ಬರಬಹುದು. ಅದಕ್ಕಾಗಿ ಪ್ರತಿ ಜಿಪಂ ವ್ಯಾಪ್ತಿಯಲ್ಲಿ 5 ಬೋರ್‌ವೆಲ್ ಕೊರೆಯಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದರು.