ಜಿಲ್ಲೆ

ಸಾಧಕರಿಗೆ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ

ಮೈಸೂರು: ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿ ಆಗದ ಹೊರತು ಅಭಿವೃದ್ಧಿ ಅಸಾಧ್ಯ ಎಂದರಿತಿದ್ದ ಸುತ್ತೂರು ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅದಕ್ಕಾಗಿ ಅಹರ್ನಿಶಿ ದುಡಿದರು ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.
ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ 109ನೇ ಜಯಂತಿ ಮಹೋತ್ಸವ ಹಾಗೂ ಸಾಧಕರಿಗೆ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿ ಆಗದ ಹೊರತು ಅಭಿವೃದ್ಧಿ ಅಸಾಧ್ಯ ಎನ್ನುವುದನ್ನು ಶ್ರೀಗಳು ಅರಿತಿದ್ದರು. ಹಾಗಾಗಿ ಅನೇಕ ಕಡೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಿದರು. ಇದರಿಂದ ಮೈಸೂರು, ಚಾಮರಾಜನಗರ ಭಾಗದ ಶೈಕ್ಷಣಿಕ ಪ್ರಗತಿಯ ಮೂಲ ಕಾರಣಕರ್ತರಾದರು ಎಂದರು.
ಸಮಾಜದ ಒಳಿತಿನ ದೂರದೃಷ್ಟಿ ಹೊಂದಿದ್ದ ಅವರು ಸರ್ಕಾರವೇ ಮಾಡಲಾಗದಂತಹ ಹತ್ತು ಹಲವು ಕಾರ್ಯಗಳನ್ನು ಮಾಡಿದ್ದಾರೆ. ಧಾರ್ಮಿಕ ಕಾರ್ಯದ ಜತೆಗೆ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದರು.
ಶ್ರೀಗುರು ವಿದ್ಯಾ ವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಸೋಮಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಾಲಂಗಿ ಸುರೇಶ್, ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಉದ್ಘಾಟಿಸಿದರು.
ಸಮಾಜ ಸೇವಕ ರಘುರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸಿ, ತಾವು ಶಿವರಾತ್ರಿ ರಾಜೇಂದ್ರ ಶ್ರೀಗಳೊಡನೆ ಹೊಂದಿದ್ದ ಒಡನಾಟವನ್ನು ಮೆಲುಕು ಹಾಕಿದರು.
ಸಾಧಕರಾದ ಶ್ರೀವಿಷ್ಣು ಸಾಲಿಗ್ರಾಮ ಸ್ವಾಮೀಜಿ, ಯೋಗೀಶ್ ಚುಂಚನಹಳ್ಳಿ ಹಾಗೂ ವೀರೇಶ್ ವೀರಪ್ಪ ಅವರಿಗೆ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಸದಸ್ಯೆ ಜ್ಯೋತಿ ರೇಚಣ್ಣ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ನಿರ್ದೇಶಕ ಪರಮೇಶ್, ಖಜಾಂಚಿ ಮಹದೇವ್, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಇತರರು ಇದ್ದರು.