ಶ್ರೀನಿವಾಸಪುರ: ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಸುರಿದ ಮಳೆಯಿಂದ ವಾತಾವರಣ ಬದಲಾಗಿರುವುದರಿಂದ ಮಾವು ಹೂ ಬಿಡುವುದು ವಿಳಂಭವಾಗಿದೆ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ. ಹಿತ್ತಲಮನಿ ಹೇಳಿದರು.
ಶ್ರೀನಿವಾಸಪುರ ತಾಲೂಕಿನ ನೀಲಟೂರು ಚಿನ್ನಪ್ಪರೆಡ್ಡಿ ಅವರ ಮಾವಿನ ತೋಟಕ್ಕೆ ಶನಿವಾರ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಬೆಂಗಳೂರಿನ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯ ತಜ್ಞರು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ೆಬ್ರವರಿಯಲ್ಲಿ ಮಾವು ಹೂ ಬಿಡುವ ಪ್ರಕ್ರಿಯೆ ಆರಂಭವಾಗಲಿದೆ. ಡಿಸೆಂಬರ್ ತಿಂಗಳಲ್ಲಿ ಮೋಡ ಮುಚ್ಚಿದ ವಾತಾವರಣ ಹಾಗೂ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಹೂ ಬಿಡಲು ವಿಳಂಭವಾಗಿದೆ ಅಷ್ಟೇ. ಇದರಿಂದ ಬೆಳೆಗಾರರು ಯಾವುದೇ ಆತಂಕ ಪಡಬೇಕಿಲ್ಲ ಎಂದರು.
ಹೂ ಬಿಡುವ ಪೂರ್ವ ಹಾಗೂ ಮೊಗ್ಗು ಹೊರಹೊಮ್ಮುವ ಹಂತವಾಗಿರುವುದರಿಂದ ಜಿಗಿ, ಥ್ರಿಪ್ಸ್‌ಹುಳು, ಹೂವಿನ ತೆನೆ ಒಣಗುವ ರೋಗ, ಹೂ ತೆನೆಯ ಕೊರಕುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವನ್ನು ನಿಯಂತ್ರಿಸಲು ಇಮಿಡಾಕ್ಲೋಪಿಡ್ ಮತ್ತು ಹೆಕ್ಸಾಕೋಜೋಲ್ ಅಥವಾ ಸೈಹ್ಯಾಲೋತ್ರಿನ್ ಮತ್ತು ಕೆಕ್ಸಾಕೋಚೋಲ್ ಔಷಧ ಸಿಂಪಡನೆ ಮಾಡಬೇಕು. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮಾವು ಅಭಿವೃದ್ಧಿ ಕೇಂದ್ರವನ್ನು ಸಂಪರ್ಕಿಸಿ ರೈತರು ಮಾಹಿತಿ ಪಡೆಯಬೇಕು ಎಂದರು.
ಸಮಿತಿ ಸದಸ್ಯ ಡಾ. ವೈ.ಟಿ.ಎನ್. ರೆಡ್ಡಿ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜ್, ಮಾವು ಅಭಿವೃದ್ಧಿ ಕೇಂದ್ರ ಹೊಗಳಗೆರೆ ತೋಟಗಾರಿಕೆ ಉಪನಿರ್ದೇಶಕ ಎಚ್.ಟಿ. ಬಾಲಕೃಷ್ಣ, ಮಾವು ಅಭಿವೃದ್ಧಿ ಕೇಂದ್ರ ಮಡಿಕೇರಿ ಉಪನಿರ್ದೇಶಕ ಕೆ.ಬಿ. ಕೃಷ್ಣಮೂರ್ತಿ ಇತರರು ಇದ್ದರು.