ನಂಜನಗೂಡು: ಪ್ರಸ್ತುತ ರಾಜಕಾರಣಿಗಳು ತತ್ವ ಜ್ಞಾನದ ಕೊರತೆಯಿಂದ ಗೊಂದಲದಲ್ಲಿ ಮುಳುಗಿದ್ದು, ಇದಕ್ಕೆ ಅಪವಾದ ಎಂಬಂತೆ ಸಂಸದ ವಿ.ಶ್ರೀನಿವಾಸಪ್ರಸಾದ್ ತತ್ವ ಜ್ಞಾನಯುಳ್ಳ ರಾಜಕಾರಣಿಯಾಗಿದ್ದರು. ಇದರ ಪರಿಣಾಮವಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಆಧ್ಯಾತ್ಮ ಚಿಂತಕ ಶಂಕರ್ ದೇವನೂರು ಬಣ್ಣಿಸಿದರು.
ತಾಲೂಕಿನ ಸಿಂಧುವಳ್ಳಿ ಗೇಟ್ ಬಳಿಯಿರುವ ಸಂತಾನ ಗಣಪತಿ ಕಲ್ಯಾಣ ಮಂಪಟದಲ್ಲಿ ನಂಜನಗೂಡು ನಾಗರಿಕ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ವಿ.ಸ್ರೀನಿವಾಸಪ್ರಸಾದ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರನ್ನೂ ಒಳಗೊಳ್ಳುವ ಮಾತೃ ಸ್ವರೂಪದ ಭಾವ ವಿ.ಶ್ರೀನಿವಾಸಪ್ರಸಾದ್ ಅವರಲ್ಲಿತ್ತು. ಮಹಾಬೆಳಕಿನ ಪ್ರತೀಕವಾಗಿ ಸಮಾಜದ ನಡುವೆ ಕೊಂಡಿಯಾಗಿದ್ದರು. ಮಠಗಳು ಸಾಮಾಜಿಕ ನ್ಯಾಯದ ಕೇಂದ್ರಗಳಾಗಬೇಕೆಂದು ಪ್ರತಿಪಾದಿಸಿದ್ದರು. ಅವರು ಮಾತಿನಿಂದ ಮಂಟಪ ಕಟ್ಟಲಿಲ್ಲ. ಬದಲಾಗಿ ತಮ್ಮ ಬದುಕಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಂಡು ಅದರಂತೆ ನಡೆ, ನುಡಿಯಲ್ಲಿ ತೋರಿಸಿಕೊಟ್ಟು ಹೋಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಹೇಗೆ ಸಾಗಬೇಕೆಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಈ ಜಗತ್ತಿಗೆ ನಾವು ಇರುವಿಕೆಯನ್ನು ಅರಿಯಲು ಬಂದಿದ್ದೇವೆ. ಮಾನವ ಸಂಬಂಧ ಗಟ್ಟಿ ಮಾಡದೇ ಸಮಾಜವನ್ನು ಉದ್ಧರಿಸಲು ಸಾಧ್ಯವಿಲ್ಲ. ಆಳ್ವಿಕೆಯಲ್ಲಿ ನಮ್ಮ ಬಾಳ್ವಿಕೆ ಇರಬೇಕೆಂಬುದನ್ನು ತೋರಿಸಿಕೊಟ್ಟ ಶ್ರೀನಿವಾಸಪ್ರಸಾದ್ ಇಂದಿನ ಕಾಲಘಟ್ಟದ ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನಮ್ಮ ತಂದೆ ಧ್ರುವನಾರಾಯಣ ಹಾಗೂ ಶ್ರೀನಿವಾಸಪ್ರಸಾದ್ ನಡುವೆ ಉತ್ತಮ ಬಾಂಧವ್ಯವಿತ್ತು. ತಾವು ಇರುವವರೆಗೂ ಅತಿ ಹೆಚ್ಚು ಗೌರವ, ಪ್ರೀತಿ ಹೊಂದಿದ್ದರು. ನಾನು ವಕೀಲನಾಗಲು ಶ್ರೀನಿವಾಸಪ್ರಸಾದ್ ಅವರ ಸಹಾಯವೂ ಇದೆ. ಶ್ರೀನಿವಾಸಪ್ರಸಾದ್ ಶಾಸಕರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಿಧಾನಸೌಧದಿಂದ ಅವರಿಗೆ ನೀಡಲಾಗಿದ್ದ ರೂಮಿನಲ್ಲಿ ಎರಡು ವಾರಗಳ ಕಾಲ ವ್ಯಾಸಂಗ ಮಾಡಿ ಎಲ್‌ಎಲ್‌ಬಿ ಪ್ರವೇಶ ಪರೀಕ್ಷೆ ಬರೆಯಲು ನೆರವಾಗಿದ್ದರು ಎಂದು ಸ್ಮರಿಸಿದರು.
ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರಿಗೆ ಬಡವರ ಪರವಾಗಿ ತುಂಬಾ ಕಾಳಜಿ ಹೊಂದಿದ್ದನ್ನು ನಾನು ತುಂಬಾ ಹತ್ತಿರದಿಂದ ಬಲ್ಲೆ. ಅವರು ನಂಜನಗೂಡಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಹಾಗಾಗಿ ಅವರ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಪ್ರವಾಸಿ ಮಂದಿರದ ಮುಂದೆ ನಿರ್ಮಾಣ ಮಾಡಿರುವ ಬಟಾನಿಕಲ್ ಗಾರ್ಡನ್‌ಗೆ ಅವರ ಹೆಸರು ನಾಮಕರಣ ಮಾಡಬೇಕು. ಜತೆಗೆ ರೈಲ್ವೆ ಮೇಲ್ಸೇತುವೆಗೆ ಶ್ರೀನಿವಾಸಪ್ರಸಾದ್ ಹೆಸರಿಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡೋಣ ಎಂದರು.
ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಮಾತನಾಡಿದರು. ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ಕಸುವಿನಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ, ಶ್ರೀನಿವಾಸಪ್ರಸಾದ್ ಸಹೋದರ ವಿ.ರಾಮಸ್ವಾಮಿ, ಜಿಪಂ ಮಾಜಿ ಅಧ್ಯಕ್ಷೆ ಎಂ.ಲತಾ ಸಿದ್ದಶೆಟ್ಟಿ, ಮಾಜಿ ಸದಸ್ಯರಾದ ಮಂಗಳಾ ಸೋಮಶೇಖರ್, ಸಿ.ಚಿಕ್ಕರಂಗನಾಯ್ಕ, ಮುಖಂಡರಾದ ಯು.ಎನ್.ಪದ್ಮನಾಭರಾವ್, ಕುಂಬ್ರಹಳ್ಳಿ ಸುಬ್ಬಣ್ಣ, ನಂದಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಶಂಕರ್, ಶ್ರೀಕಂಠನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‌ರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ ಸೇರಿದಂತೆ ಹಲವರಿದ್ದರು.