ಮಡಿಕೇರಿ:
ರೈತರ ದೈನಂದಿನ ಬದುಕು ಮತ್ತು ಬವಣೆಯನ್ನು ಅನಾವರಣಗೊಳಿಸುವ ಹಾಸನ ರಮೇಶ್ ನಿರ್ದೇಶನದ ’ಶ್ರೀಮಂತ’ ಚಿತ್ರ ಏ. ೧೪ರಂದು ತೆರೆಗೆ ಬರಲಿದೆ ಎಂದು ಚಿತ್ರದ ಸಹಾಯಕ ನಿರ್ದೇಶಕ ಶಿವರಾಜ್ ದಳವಾಯಿ ತಿಳಿಸಿದರು. ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ೧೦ ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಇರುವ ಹಾಸನ ರಮೇಶ್ ಅವರು ಜಿ. ನಾರಾಯಣಪ್ಪ ಮತ್ತು ವಿ. ಸಂಜಯಬಾಬು ಅವರೊಂದಿಗೆ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ. ನಿರ್ದೇಶನವನ್ನೂ ರಮೇಶ್ ಅವರೇ ಮಾಡಿದ್ದಾರೆ.
ರೈತನೇ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತ ಎಂದು ಸಾಕ್ಷೀಕರಿಸುವ ಚಿತ್ರ ಇದಾಗಿದೆ. ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಹಾಡು, ಹಸೆ, ಹಳ್ಳಿ ಆಟಗಳು, ಗ್ರಾಮೀಣ ಸೊಗಡನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಬಂಗಾರದ ಮನುಷ್ಯ ಸಿನಿಮಾ ದಾಟಿಯಲ್ಲಿ ಬಂದಿದೆ.
ಸೋನು ಸೂದ್ ಪ್ರಥಮ ಬಾರಿಗೆ ಕನ್ನಡದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ನಾಯಕಿಯರಾಗಿ ವೈಷ್ಣವಿ ಪಟುವರ್ಧನ್, ವೈಷ್ಣವಿ ಚಂದ್ರನ್ ಮೆನನ್ ಇದ್ದು, ಕ್ರಾಂತಿ ಎನ್ನುವ ಯುವ ಪ್ರತಿಭೆಯನ್ನು ಪರಿಚಯಿಸಲಾಗಿದೆ.
ಹಿರಿಯ ಕಲಾವಿದರಾದ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ರಾಜು ತಾಳಿ ಕೋಟೆ ಮತ್ತಿತರರು ಚಿತ್ರದಲ್ಲಿದ್ದು, ಈ ಸಾಮುದಾಯಿಕ ಚಿತ್ರವನ್ನು ಬಹುಪಾಲು ನೈಜ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದೆ.
ಹಂಸಲೇಖ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ. ರವಿಕುಮಾರ್ ಸನ ಛಾಯಾಗ್ರಹಣ, ಮದನ್ ಹರಿಣಿ ಹಾಗೂ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಇದೊಂದು ದೊಡ್ಡ ಬಜೆಟ್‌ನ ದೊಡ್ಡ ತಾರಾ ಬಳಗದ ಸಿನಿಮಾವಾಗಿದ್ದು ೬ ವರ್ಷಗಳ ದೀರ್ಘ ಕಾಲ ಚಿತ್ರೀಕರಿಸಲಾಗಿದೆ. ೮ ಹಾಡುಗಳಿದ್ದು ಕುಟುಂಬ ಸಮೇತ ನೋಡಬಹುದಾದ ದೇಸೀ ಸಿನಿಮಾ ಇದು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿದ ಕೊನೆಯ ಕನ್ನಡ ಹಾಡು ಈ ಚಿತ್ರದಲ್ಲಿದೆ ಎಂದರು.
ಸಹಾಯಕ ನಿರ್ದೇಶಕಿ ವೇದ ಎಂ ಗೌಡ, ಚಿತ್ರ ತಂಡದ ಸುರೇಶ್, ವಾಲ್‌ನೆಟ್ ಮಹೇಶ್, ಗುರು ಗೌಡ್ರು ಸುದ್ದಿಗೋಷ್ಠಿಯಲ್ಲಿ ಇದ್ದರು.