ಮೂಲ್ಕಿ: ಒಳಲಂಕೆ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ ಪ್ರಯುಕ್ತ ವಿವಿಧ ಅಭಿಷೇಕ, ಪೂಜೆಗಳು ಗುರುವಾರ ನೆರವೇರಿತು.
ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಾರ್ವಜನಿಕರಲ್ಲಿ ಸಾಮರಸ್ಯ ಹಾಗೂ ಐಕ್ಯಮತ್ಯ ಬೆಳೆದು ಶಾಂತಿ, ಸೌಹಾರ್ದ ಉನ್ನತಿಯಾಗಲಿ ಎಂದರು. ಭಕ್ತವೃಂದ ಭಕ್ತಿಯಿಂದ ಸಮರ್ಪಿಸಿದ ಸೇವೆಯನ್ನು ದೇವರು ಸ್ವೀಕರಿಸಿ ಗ್ರಾಮಕ್ಕೆ ದೇಶಕ್ಕೆ ಅಭಿವೃದ್ಧಿಯನ್ನು ನೀಡಬೇಕು ಎಂದು ಪ್ರಾರ್ಥಿಸಿದರು.
ಮುಂಜಾನೆ ಮೂಲ್ಕಿಪೇಟೆಯಲ್ಲಿ ನಗರ ಕಾಣಿಕೆ ಮೆರವಣಿಗೆ ಮೂಲಕ ಫಲ ಕಾಣಿಕೆ ಸಮರ್ಪಣೆ ನಡೆಯಿತು. ಬಳಿಕ ದೇವಸ್ಥಾನದಲ್ಲಿ ಕಾಶೀ ಮಠಾಧೀಶರ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ, ಉಗ್ರ ನರಸಿಂಹ ದೇವರಿಗೆ ಅರ್ಚನೆ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನೆರವೇರಿತು.
ಸಂಜೆ ಕನಕಾಭಿಷೇಕ, ಗಂಗಾ ಭಾಗೀರಥಿ ಅಭಿಷೇಕ, ಪೂಜೆ ನಡೆದು ಸನ್ನಿಧಾನ ಪ್ರಸಾದ ಮತ್ತು ಹತ್ತು ಸಮಸ್ತರಿಗೆ ಪ್ರಸಾದ ವಿತರಿಸಲಾಯಿತು. ಮಹಾನೈವೇದ್ಯ, ಮಂಗಳಾರತಿ, ಭೂರಿ ಸಮಾರಾಧನೆ, ರಾತ್ರಿ ಪೂಜೆ, ರಥೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಅರ್ಚಕ ವೃಂದ, ಮೊಕ್ತೇಸರರು ಉಪಸ್ಥಿತರಿದ್ದರು.