ಬೆಟ್ಟದಪುರ: ಬಡವರಿಗೆ ಹಾಗೂ ನಿರ್ಗತಿಕರಿಗೆ ನೆರವು ನೀಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವೆ ಶ್ಲಾಘನೀಯ ಎಂದು ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಉಪಾಧ್ಯಕ್ಷ ಬಿ.ಜೆ.ದೇವರಾಜು ಹೇಳಿದರು.
ಸೀಗೂರುಕೊಪ್ಪಲು ಗ್ರಾಮದ ಮಾಸಾಶನ ಸದಸ್ಯೆ ಸಾವಿತ್ರಮ್ಮ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಬೆಟ್ಟದಪುರ ಜ್ಞಾನವಿಕಾಸ ಕಾರ್ಯಕ್ರಮದಡಿ ನಿರ್ಮಿಸಿರುವ ವಾತ್ಸಲ್ಯ ಮನೆಯನ್ನು ಇತ್ತೀಚೆಗೆ ಹಸ್ತಾಂತರಿಸಿ ಮಾತನಾಡಿದರು.
ವಲಯ ಯೋಜನಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ನಿರ್ಗತಿಕ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವುದರ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಾಗುತ್ತಿದೆ. ಕುಟುಂಬಕ್ಕೆ ಸೂರನ್ನು ನಿರ್ಮಿಸುವುದು ಹೆಮ್ಮೆಯ ವಿಚಾರ. ಸ್ವಂತ ಜಾಗ ಹೊಂದಿದ ನಿರ್ಗತಿಕರಿಗೆ ವಾತ್ಸಲ್ಯ ಯೋಜನೆಯಡಿ 1 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಜತೆಗೆ ಪ್ರತಿ ತಿಂಗಳೂ ಒಂದು ಸಾವಿರ ಮಾಸಾಶನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ ನಾಗೇಗೌಡ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಮಮಿತಾ, ಕೀರ್ತಿರಾಜ್, ವಲಯ ಮೇಲ್ವಿಚಾರಕಿ ಶ್ರೀಮತಿ, ಸೇವಾ ಪ್ರತಿನಿಧಿಗಳಾದ ಶೀಲಾ, ಕುಮಾರಿ ಇತರರು ಇದ್ದರು.