ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗದ ಸೇವೆ ಸಹಕಾರಿ ಸಂಘಗಳ ಮೂಲಕ ಸಿಗುತ್ತಿದ್ದು, ಜನಸಾಮಾನ್ಯರಿಗೆ ಸರಳವಾಗಿ ತ್ವರಿತ ಅಗತ್ಯ ವ್ಯವಸ್ಥೆಗಳಾಗುತ್ತಿವೆ. ಕರ್ತವ್ಯ ನಿಷ್ಠೆಯ ಮೂಲಕ ವ್ಯವಹಾರ ನಡೆಸುತ್ತಿರುವ ಶ್ರೀ ಗುರುದೇವ ಸಹಕಾರ ಸಂಘ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಅವರ ಅಭಿವೃದ್ಧಿಗೆ ಸಂಘವು ಅಡಿಪಾಯ ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.
ಶನಿವಾರ ಬೆಳ್ತಂಗಡಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ’ಶ್ರೀ ಗುರು ಸಾನಿಧ್ಯ’ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಮತ್ತು ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಕೇರಳದಲ್ಲಿ ನಾರಾಯಣ ಗುರುಗಳು ಸಹಕಾರಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯಿಂದ ಇಂದು ಅಲ್ಲಿನ ಸರ್ಕಾರ ಸಹಕಾರಿ ಕ್ಷೇತ್ರವನ್ನೇ ಅವಲಂಬಿಸಿದೆ. ಅಂತೆಯೇ ಇಲ್ಲಿನ ಬಡವರ ಪರ ಚಿಂತನೆಯ ವಸಂತ ಬಂಗೇರ ಕಲ್ಪನೆಯ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಅಡಳಿತದ ಸಹಕಾರ ಮತ್ತು ಸಿಬ್ಬಂದಿಯ ನಗುಮೊಗದ ಸೇವೆಯಿಂದ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸಂಕುಚಿತ ಮನೋಭಾವವಿದ್ದರೆ ಸಹಕಾರಿ ಸಂಘಗಳಲ್ಲಿ ವಿಕಸಿತ ಮನೋಭಾವವಿದ್ದು ಜನರ ನಾಡಿಮಿಡಿತಕ್ಕೆ ತಕ್ಕದಾಗಿ ಕರ್ತವ್ಯ ನಿರ್ವಹಿಸುತ್ತಿವೆ.ಇಲ್ಲಿನ ಸಿಬ್ಬಂದಿ ನೀಡುವ ಸೇವೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಸಂಘ 50 ಶಾಖೆಗಳನ್ನು ಸ್ಥಾಪಿಸುವಂತಾಗಲಿ ಎಂದರು. ಹೊಸ ಕಟ್ಟಡಕ್ಕೆ 5 ಲಕ್ಷ ರೂ.ದೇಣಿಗೆ ಘೋಷಿಸಿದರು.
ಶಾಸಕ ಹರೀಶ್ ಪೂಂಜ ಭದ್ರತಾ ಕೊಠಡಿ ಉದ್ಘಾಟಿಸಿ, ಗುರುದೇವ ಸಂಘದ ಏಳಿಗೆಯಲ್ಲಿ ಕೆ.ಜಿ.ಬಂಗೇರ, ವಸಂತ ಬಂಗೇರರಂತಹ ಹಿರಿಯರ ಪಾತ್ರ ಅನನ್ಯವಾದದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಭಾಭವನ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷ ಭಾಸ್ಕರ್ ಎಂ. ಪೆರುವಾಯಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ ಪಿ., ಸಂಘದ ಸಿಇಒ ಅಶ್ವತ್ಥ್ ಕುಮಾರ್, ನಿರ್ದೇಶಕರು ಉಪಸ್ಥಿತರಿದ್ದರು.
ನಿರ್ದೇಶಕ ಪಿ. ಧರಣೇಂದ್ರ ಕುಮಾರ್ ಸ್ವಾಗತಿಸಿದರು. ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು ಸಂಘ ನಡೆದು ಬಂದ ದಾರಿ ಕುರಿತು ವಿವರ ನೀಡಿದರು. ಪ್ರಜ್ಞಾ ಓಡಿಲ್ನಾಳ ಮತ್ತು ದಿನೇಶ ಸುವರ್ಣ ರಾಯಿ ನಿರೂಪಿಸಿದರು.
2007-08ನೇ ಸಾಲಿನಲ್ಲಿ ಕೆ.ಜಿ. ಬಂಗೇರ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಪದ್ಮನಾಭ ಮಾಣಿಂಜೆ ಅಧ್ಯಕ್ಷತೆಯಲ್ಲಿ ಪ್ರಗತಿ ಹಾದಿಯಲ್ಲಿ ಮುನ್ನಡೆಯುತ್ತ ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಹೆಚ್ಚಿನ ಎಲ್ಲ ಸೇವೆಗಳನ್ನು ನೀಡುತ್ತಿದೆ. ಮೈಸೂರು ಪ್ರಾಂತ್ಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 22 ಶಾಖೆಗಳನ್ನು ಹೊಂದಿದೆ. 2025ಕ್ಕೆ ಇದನ್ನು 25ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ 5.5 ಕೋಟಿ ರೂ. ವೆಚ್ಚದ ಸುಸಜ್ಜಿತ ವಾಣಿಜ್ಯ ಸಂಕೀರ್ಣ ಹಾಗೂ ಆಡಳಿತ ಕಚೇರಿ ಲೋಕಾರ್ಪಣೆಗೊಂಡಿದೆ.
ನಮ್ಮ ಸಹಕಾರ ಸಂಘದ ಯಶಸ್ಸಿನ ಶಕ್ತಿ ಹಲವಾರು ಮಂದಿ. ಸಹಕಾರಿ ಸಂಘದ ವಿಶೇಷಾಧಿಕಾರಿ ಮೋನಪ್ಪ ಪೂಜಾರಿಯವರ ಶಿಸ್ತು, ಪ್ರಾಮಾಣಿಕತೆ, ಎಲ್ಲರೊಂದಿಗೆ ಬೆರೆಯುವ ಗುಣ, ಪಾರದರ್ಶಕತೆ ನಮಗೆ ಆದರ್ಶ. ಅಧ್ಯಕ್ಷರ, ಎಲ್ಲ ನಿರ್ದೇಶಕರ, ಸರ್ವ ಸದಸ್ಯರ ಸಲಹೆ ಸೂಚನೆಗಳಿಂದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳೆದಿದೆ. - ಅಶ್ವಥ್ ಕುಮಾರ್, ಸಿಇಒ https://www.vijayavani.net/the-bus-slipped-into-the-pit https://www.vijayavani.net/theft-5