ಚಿಕ್ಕಮಗಳೂರು: ಐಡಿಎಸ್ಜಿ ಕಾಲೇಜು ಸಮೀಪ ನಿರ್ವಿುಸಿರುವ ಅಷ್ಟಲಕ್ಷ್ಮೀ ಸಹಿತ ಮಹಾಲಕ್ಷ್ಮೀ ದೇವಾಲಯ ಉದ್ಘಾಟನೆ ಕಾರ್ಯಕ್ರಮ ಫೆ.6 ಮತ್ತು 7 ರಂದು ಹಮ್ಮಿಕೊಳ್ಳಲಾಗಿದೆ.
ಮಹಾಲಕ್ಷ್ಮೀ ದೇವಾಲಯದ ಕುಂಭಾಭಿಷೇಕವನ್ನು ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಫೆ.7 ರಂದು ಬೆಳಗ್ಗೆ 9.30ಕ್ಕೆ ನೆರವೇರಿಸುವರು.
ಶ್ರೀಗಳು ಫೆ.6 ರಂದು ಸಂಜೆ 4.30ಕ್ಕೆ ನಗರಕ್ಕೆ ಆಗಮಿಸಲಿದ್ದು, ಅವರನ್ನು ದೇಗುಲದ ಮುಂಭಾಗದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಧೂಳೀ ಪಾದಪೂಜೆ ಬಳಿಕ ಶ್ರೀಗಳಿಂದ ಆಶೀರ್ವಚನ ಆನಂತರ ಚಂದ್ರಮೌಳೇಶ್ವರ ಪೂಜೆ ನಡೆಯಲಿದೆ.
ದೇಗುಲದ ಆವರಣದಲ್ಲಿ ಫೆ.7 ರಂದು ಕುಂಭಾಭಿಷೇಕದ ನಂತರ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಉಪಸಭಾಪತಿ ಎಸ್.ಎಲ್.ಧಮೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಕಾಫಿ ಬೆಳೆಗಾರರಾದ ಗೌರಮ್ಮ ಬಸವೇಗೌಡ ಮತ್ತು ಸಿ.ಎನ್.ಚಂದ್ರು ಭಾಗವಹಿಸುವರು.
ಐದು ಅಂಕಣಗಳ ವಿಶಿಷ್ಟ ದೇವಾಲಯ: ವಿಶಿಷ್ಟವಾದ ಮಹಾಲಕ್ಷ್ಮೀ ದೇವಾಲಯವನ್ನು ಮೈಸೂರು ಕಾಫಿ ವೆಲ್ಪೇರ್ ಟ್ರಸ್ಟ್ ಹಾಗೂ ಅದರ ಮುಖ್ಯಸ್ಥ ವಿ.ರಾಮರಾವ್ ನಿರ್ವಿುಸಿದ್ದು ಪ್ರಧಾನ ದೇವತೆ ಮಹಾಲಕ್ಷ್ಮೀ ಜತೆಗೆ ಅಮೃತ ಶಿಲೆಯ ಅಷ್ಟಲಕ್ಷ್ಮೀಯರಾದ ಆದಿಲಕ್ಷ್ಮೀ, ಸಂತಾನಲಕ್ಷ್ಮೀ, ಗಜಲಕ್ಷ್ಮೀ, ಧನಲಕ್ಷ್ಮೀ, ಭಾಗ್ಯಲಕ್ಷ್ಮೀ, ವೀರಲಕ್ಷ್ಮೀ, ವಿಜಯಲಕ್ಷ್ಮೀ, ಐಶ್ವರ್ಯಲಕ್ಷ್ಮೀ ವಿಗ್ರಹಗಳೂ ಇದ್ದು ದೇಗುಲದ ನಾಲ್ಕೂ ಉಪದಿಕ್ಕುಗಳಲ್ಲಿ ಶ್ರೀರಾಮ, ಆಂಜನೇಯ, ಕಾರ್ತಿಕೇಯ ಮತ್ತು ಗಣಪತಿ ದೇವಾಲಯಗಳು ದೇಗುಲದ ಒಳಾವರಣದಲ್ಲಿವೆ. ಒಟ್ಟು ಐದು ಅಂಕಣಗಳ ಈ ದೇಗುಲ ವಿಶ್ವದಲ್ಲೇ ವಿಶಿಷ್ಟವಾಗಿದ್ದು ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪಿ ಗಣಪತಿ ಸ್ಥಪತಿ ಮಾರ್ಗದರ್ಶನದಲ್ಲಿ ನಿರ್ವಿುಸಲಾಗಿದೆ.
1996ರಲ್ಲಿ ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರಿಂದ ಭೂಮಿ ಪೂಜೆ ಮೂಲಕ ದೇಗುಲ ನಿರ್ಮಾಣ ಆರಂಭವಾಯಿತು. ಹಲವು ಕಾರಣಗಳ ಹಿನ್ನೆಲೆಯಲ್ಲಿ ದೇವಾಲಯ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಸಂಸ್ಥಾಪಕ ಟ್ರಸ್ಟಿ ವಿ. ರಾಮರಾವ್ ಅವರಿಗೆ ಶೃಂಗೇರಿ ಶ್ರೀಗಳು ಈ ದೇವಾಲಯದ ನಿರ್ಮಾಣ ಕಾರ್ಯ ನಿಮ್ಮ ನೇತೃತ್ವದಲ್ಲೇ ಪೂರ್ಣಗೊಳ್ಳುವುದು ಎಂದು ಹೇಳಿದ ಹಿನ್ನೆಲೆಯಲ್ಲಿ ಸದ್ಯ ಪ್ರಧಾನ ಗೋಪುರ ಸೇರಿ ನಾಲ್ಕು ಗೋಪುರಗಳನ್ನು ಹೊಂದಿರುವ ಹಾಗೂ ಭಕ್ತರಿಗೆ ಪೂಜೆ ಮತ್ತು ಪ್ರದಕ್ಷಿಣೆಗೆ ಅವಕಾಶವಾಗುವಂತೆ ವಿಶಾಲ ಪ್ರಾಧಿಕಾರಗಳೊಂದಿಗೆ ಸುಂದರವಾಗಿ ನಿರ್ವಿುಸಲಾಗಿದೆ.