ಶೃಂಗೇರಿ: ನವರಾತ್ರಿ ಮಹೋತ್ಸವ ಅಂಗವಾಗಿ ಶ್ರೀಶಾರದೆ ವೀಣಾಶಾರದಾ ಅಲಂಕಾರದಲ್ಲಿ ಕಂಗೊಳಿಸಿದಳು.ಜಗನ್ಮಾತೆ ಕೈಯಲ್ಲಿ ವೀಣೆಯನ್ನು ಧರಿಸಿ ಜಡರಾದ ಭಕ್ತರಿಗೆ ಜ್ಞಾನ ಅನುಗ್ರಹಿಸುವ ಮಾತೆಯಾದಳು.
ಶ್ರೀ ಮಠದಲ್ಲಿ ಸರಸ್ವತ್ಯಾವಾಹನೆ ಧಾರ್ಮಿಕ ವಿಧಿಗಳನ್ನು ಪುರೋಹಿತರು ನೆರವೇರಿಸಿದರು. ದುರ್ಗಾಸಪ್ತಶತಿ, ಲಕ್ಷ್ಮೀನಾರಾಯಣ ಹೃದಯ, ಲಲಿತೋಪಾಖ್ಯಾನ, ಪ್ರಸ್ಥಾನತ್ರಯ ಭಾಷ್ಯ, ಮಹಾವಿದ್ಯೆ ಪಾರಾಯಣಗಳು, ಸೂರ್ಯನಮಸ್ಕಾರ, ಶ್ರೀಸೂಕ್ತ ಜಪ, ದುರ್ಗಾ ಜಪ, ಭುವನೇಶ್ವರಿ ಜಪ, ಸುವಾಸಿನೀ ಹಾಗೂ ಕುಮಾರೀಪೂಜೆ ಜರುಗಿತು. ಜಗದ್ಗುರುಗಳು ಶ್ರೀ ಶಾರದಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಪ್ರವಚನ ಮಂದಿರದಲ್ಲಿ ಯತಿವರ್ಯರು ಸಮ್ಮುಖದಲ್ಲಿ ಶ್ರೀಶಾರದೆಗೆ ಡೋಲೋತ್ಸವ ನಡೆಸಿದ ನಂತರ ಶ್ರೀಚಂದ್ರಮೌಳೀಶ್ವರರಿಗೆ ವಿಶೇಷ ಪೂಜೆ ನೆರವೇರಿತು.
ಶ್ರೀಮಠದ ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ಕಿರೀಟ, ಆಭರಣಗಳನ್ನು ಧರಿಸಿ ಶ್ರೀಶಾರದಾ ದೇವಾಲಯಕ್ಕೆ ಉತ್ಸವದಲ್ಲಿ ಭಾಗಿಯಾದರು. ಯತಿವರ್ಯರು ದೇವಾಲಯ ಪ್ರವೇಶಿಸಿದ ನಂತರ ಬಂಗಾರರಥದಲ್ಲಿ ಶ್ರೀಶಾರದೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದ ಒಳ ಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ಸಪ್ತಶತಿ ಪಾರಾಯಣ, ಜಗನ್ಮಾತೆಗೆ ಮಹಾಮಂಗಳಾರತಿ, ವೇದಗಳ ಪಾರಾಯಣ, ಸರ್ವಸಂಗೀತ ಹಾಗೂ ವಾದ್ಯ ಸೇವೆ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ವಿಧಿಗಳು ನೆರವೇರಿತು. ದರ್ಬಾರು ಮುಕ್ತಾಯದ ಬಳಿಕ ಯತಿವರ್ಯರು ಆಸೀನರಾದ ಸಿಂಹಾಸನಕ್ಕೆ ವಿಶೇಷಪೂಜೆ ಸಲ್ಲಿಸಲಾಯಿತು.