ಜಿಲ್ಲೆ

ಸವಿತಾ ಮಹರ್ಷಿಗಳ ಪ್ರೇರಣೆಯಿಂದ ಬದಲಾವಣೆ

ಮಂಜುನಾಥ ಅಂಗಡಿ

ಧಾರವಾಡ: ಯಾವುದೇ ಸಮಾಜದ ಪ್ರಗತಿಗೆ ಸಂಘಟನೆ ಮಹತ್ವದ್ದು. ಸವಿತಾ ಮಹರ್ಷಿಗಳ ಸಂದೇಶ ಮತ್ತು ಪ್ರೇರಣೆಯಿಂದ ಸವಿತಾ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿವೆ ಎಂದು ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಹೇಳಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಅನೇಕ ಸಮಾಜಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದರಿಂದ ಸಾಮಾಜಿಕ ಬದಲಾವಣೆ ಹಾಗೂ ಉದ್ಯೋಗಗಳಲ್ಲಿ ವೈವಿಧ್ಯತೆ ಕಾಣುತ್ತಿದೆ. ಇದರಿಂದಾಗಿ ಎಲ್ಲರಲ್ಲೂ ಸಮಾನತೆ ಮೂಡುತ್ತಿದೆ. ಪಾರಂಪರಿಕ ಅಥವಾ ಕುಲಕಸಬು ಹೆಸರಿನಲ್ಲಿ ಆಗುತ್ತಿದ್ದ ಶೋಷಣೆ, ಸಮಾಜಿಕ ಅಸಮಾನತೆ ಕಡಿಮೆಯಾಗಿದೆ. ಜನರಲ್ಲಿ ಉದ್ಯೋಗವು ಐಚ್ಛಿಕ ಆಯ್ಕೆಯಾಗಿದೆ ಎಂದರು.
ಬಾಗಲಕೋಟೆ ರನ್ನಬೆಳಗಲಿಯ ಯೋಗ ಶಿಕ್ಷಕ ಹಾಗೂ ಉಪನ್ಯಾಸಕ ರಾಘವೇಂದ್ರ ನೀಲನ್ನವರ ಶ್ರೀ ಸವಿತಾ ಮಹರ್ಷಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜದ ಮುಖಂಡರಾದ ಕೃಷ್ಣಾ ಉಪ್ಪೇರ, ಪರಶುರಾಮ ಬದ್ದೆಪಲ್ಲಿ, ಮೋಹನ ಗೋಲಿ, ಎಂ. ವಿಜಯ ಭಾಸ್ಕರ, ಜೀವಣ್ಣ ರಾಂಪೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.