ಚಿಕ್ಕಮಗಳೂರಿನ ಡಿಎಸಿಜಿ ಕಾಲೇಜಿನಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳು ಹಾಗೂ ವಿದ್ಯಾರ್ಥಿಗಳು ವ್ಯಸನಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಾರಾಯಣರಡ್ಡಿ ಕನಕರಡ್ಡಿ, ಡಾ.ಅಶ್ವಥ್ ಬಾಬು, ಸುಮಂತ್, ಡಾ.ಮಂಜುನಾಥ್, ಶೈಲೇಂದ್ರ ಮತ್ತಿತರರಿದ್ದರು. 
ಜಿಲ್ಲೆ

ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದ ಶ್ರೀ ಮಹಾಂತ ಶಿವಯೋಗಿಗಳು

ಚಿಕ್ಕಮಗಳೂರು: ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಡಾ. ಮಹಾಂತ ಶಿವಯೋಗಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ತಿಳಿಸಿದರು.

ನಗರದ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಮಹಾಂತ ಶಿವಯೋಗಿ ಅವರ ಜನ್ಮ ದಿನವಾದ ಆಗಸ್ಟ್ ೧ನ್ನು ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿದ್ದು, ಸಾರ್ವಜನಿಕರು ಹಾಗೂ ಯುವ ಜನತೆ ವ್ಯಸನಗಳಿಂದ ಮುಕ್ತರಾಗಲು ಈ ದಿನಾಚರಣೆ ಪ್ರೇರಣೆಯಾಗಿದೆ. ವ್ಯಸನ ಮುಕ್ತ ಕುಟುಂಬ, ಸಮಾಜ, ಗ್ರಾಮಗಳ ನಿರ್ಮಾಣ ಮಾಡುವ ಜೊತೆಗೆ ಗುರುಗಳು ತಮ್ಮ ಜೋಳಿಗೆ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸ ಮಾಡಿಸುವ ಮೂಲಕ ವ್ಯಸನಿಗಳ ಮನಪರಿವರ್ತನೆಗೆ ಮುಂದಾಗಿದ್ದರು. ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಚಟಗಳಿಗೆ ಬಲಿಯಾಗದಂತೆ ಅರಿವು ಮೂಡಿಸುತ್ತಿದ್ದರು ಎಂದರು.
ಯುವ ಪೀಳಿಗೆಯು ತಮ್ಮ ಉತ್ತಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯಯುತ ಜೀವನಕ್ಕೆ ಒತ್ತು ನೀಡಬೇಕು. ದುಶ್ಚಟಗಳಿಗೆ ಬಲಿಯಾದರೆ ತಮ್ಮ ಆರೋಗ್ಯ ಹದಗೆಡುವುದಲ್ಲದೆ. ಇಡೀ ಕುಟುಂಬ ಸಂಕಷ್ಟ ಎದುರಿಸಬೇಕಾಗುತ್ತದೆ. ದುಶ್ಚಟಗಳನ್ನು ಬಿಡುವುದರಿಂದ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ. ಜೊತೆಗೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು ಮಾತನಾಡಿ, ಯುವ ಜನತೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ತಮ್ಮ ನೆರೆ ಹೊರೆಯವರಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಡಿವೈಎಸ್‌ಪಿ ಶೈಲೇಂದ್ರ ಮಾತನಾಡಿ, ಮಾದಕ ವಸ್ತುಗಳು, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಂದ ಯುವ ಜನತೆ ದೂರವಿರಬೇಕು. ಧೂಮಪಾನ, ಜರ್ಧಾ, ಗುಟ್ಕಾ ಸೇವನೆಯಿಂದ ಶ್ವಾಸಕೋಶ, ಬಾಯಿ ಕ್ಯಾನ್ಸರ್ ಉಂಟಾಗುತ್ತದೆ. ಆದ್ದರಿಂದ ಯುವ ಜನರು ಎಲ್ಲ ರೀತಿಯ ವ್ಯಸನಗಳಿಂದ ದೂರ ಉಳಿಯಬೇಕು ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಡಾ. ಮಹಾಂತ ಶಿವಯೋಗಿಗಳು ದುಶ್ಚಟಗಳು, ದುರ್ವ್ಯಸನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ ಜನರಲ್ಲಿನ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದರಲ್ಲದೇ ದೇಶ ವಿದೇಶಗಳಲ್ಲೂ ಕೂಡ ಜಾಗೃತಿ ಮೂಡಿಸಿದರು ಎಂದರು.
ಅನ್ನದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ ಸೇರಿದಂತೆ ಹಲವಾರು ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ಮಾಡಿದರು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಡಿ.ಎ.ಸಿ.ಜಿ. ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಎಂ.ವಿ. ಶ್ಯಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜೇಗೌಡ ಪ್ರತಿಜ್ಞಾ ವಿಧಿ ಭೋಧಿಸಿದರು. ತಹಸೀಲ್ದಾರ್ ಸುಮಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್‌ಸಿಎಚ್‌ಒ ಡಾ. ಮಂಜುನಾಥ್, ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಚಾರ್ಯ ಓಂಕಾರಸ್ವಾಮಿ, ವಾರ್ತಾ ಇಲಾಖೆ ಸಿಬ್ಬಂದಿ ಬಿ.ಆರ್. ರವೀಂದ್ರ, ಪ್ರಸನ್ನ, ಐಶ್ವರ್ಯ, ವೆಂಕಟರಾಮು ಮತ್ತಿತರರಿದ್ದರು.