ಬೇಲೂರು: ತಾಲೂಕಿನ ಬಿಕ್ಕೋಡಿನ ಶ್ರೀ ಮಹಾಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ 40ನೇ ವರ್ಷದ ವಿಸರ್ಜನಾ ಕಾರ್ಯಕ್ರಮವು ಭಾನುವಾರ ಸಂಜೆ ನೂರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಗಣೇಶ ಮೂರ್ತಿಯನ್ನು ಪುಷ್ಪಗಳಿಂದ ಅಲಂಕೃತವಾದ ತೆರೆದ ಮಂಟಪದಲ್ಲಿ ಇರಿಸಿ ರೋಡ್ ಆರ್ಕೆಸ್ಟ್ರಾ, ಕೀಲು ಕುದುರೆ, ಬೃಹತ್ ಬೊಂಬೆ, ಚಂಡೆ ವಾದ್ಯದೊಂದಿಗೆ ಸಿಡಿಮದ್ದುಗಳನ್ನು ಸಿಡಿಸಿ ಬಿಕ್ಕೊಡಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಮೀಪದ ತಾವರೆ ಕೆರೆಯಲ್ಲಿ ರಾತ್ರಿ ಮೂರ್ತಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಯುವ ಜನರು ಕುಣಿದು ಕುಪ್ಪಳಿಸಿದರು. ಬಿಕ್ಕೋಡು ಹೋಬಳಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು, ಆಗಮಿಸಿದ್ದರು.
ಮಹಾಗಣಪತಿ ಸಮಿತಿ ಅಧ್ಯಕ್ಷ ಬಿ.ಸಿ.ರವಿ, ಉಪಾಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಸಂತೋಷ್, ಖಜಾಂಚಿ ಸಂದೀಪ್, ಸಹಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಸಮಿತಿಯ ಸದಸ್ಯರು ಇದ್ದರು. ಅರೇಹಳ್ಳಿ ಪೋಲಿಸ್ ಠಾಣೆಯಿಂದ ಬಂದೋಬಸ್ತ್ ಮಾಡಲಾಗಿತ್ತು.