ಮದ್ದೂರು ಪಟ್ಟಣದಲ್ಲಿ ಶ್ರೀ ಮದ್ದೂರಮ್ಮನ ಕೊಂಡೋತ್ಸವ ಅದ್ದೂರಿಯಾಗಿ ನಡೆಯಿತು. 
ಜಿಲ್ಲೆ

ವಿಜೃಂಭಣೆಯ ಶ್ರೀ ಮದ್ದೂರಮ್ಮ ಕೊಂಡೋತ್ಸವ

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಹಾಗೂ ಶಕ್ತಿದೇವತೆ ಶ್ರೀ ಮದ್ದೂರಮ್ಮನ ಕೊಂಡೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ದೇವರ ಪಟ ಹೊತ್ತ ಅರ್ಚಕ ಗುರುಮೂರ್ತಿ ಜಿನಿ ಜಿನಿ ಕೆಂಡದ ಮೇಲೆ ನಡೆಯುವ ಸಂದರ್ಭ ಭಕ್ತರ ಉದ್ಘೋಷ ಮುಗಿಲು ಮುಟ್ಟಿತು. ಈ ವೇಳೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಅಲ್ಲದೆ ಕೊಂಡೋತ್ಸವ ನೋಡಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಏ.30ರಂದು ಬೆಳಗ್ಗೆ 10.30ಕ್ಕೆ ಶ್ರೀ ಮದ್ದೂರಮ್ಮ ಮಠಮನೆ ದೇವಸ್ಥಾನದಲ್ಲಿ ಹೋಮ-ಹವನ ನೆರವೇರಿತು. ಮಧ್ಯಾಹ್ನ 2.30ಕ್ಕೆ ಎಲ್ಲಮ್ಮ ದೇವಿಗೆ ಚಂದ್ರ ಭಂಡಾರ ಸೇವೆ ಸಲ್ಲಿಸಲಾಯಿತು. ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಕೊಂಡ ಬಂಡಿ ಉತ್ಸವ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಜೆ 6.30ಕ್ಕೆ ಮದ್ದೂರಮ್ಮನವರ ಮೂಲ ದೇವಸ್ಥಾನದಲ್ಲಿ ಅಭಿಷೇಕ ಮತ್ತು ಹೋಮ ಹವನ, ಮಹಾಮಂಗ ಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ರಾತ್ರಿ 11.30ಕ್ಕೆ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ನಂತರ ರಾತ್ರಿ 1 ಗಂಟೆಗೆ ಮಠಮನೆಯಿಂದ ಮಂಗಳವಾದ್ಯದೊಂದಿಗೆ ಶಿಂಷಾ ನದಿಗೆ ತೆರಳಿ ನದಿ ದಡದಲ್ಲಿ ಮದ್ದೂರಮ್ಮನವರಿಗೆ ನೂರೊಂದು ಚಂದ್ರ ಭಂಡಾರ ಎಡಪೂಜೆ, ಹೂ ಹೊಂಬಾಳೆ ಪೂಜೆ, ಕರಗ ಪೂಜೆ ನೆರವೇರಿಸಲಾಯಿತು. ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಮಠಮನೆಗೆ ಆಗಮಿಸಿತು.

ಗುರುವಾರ ಸಿಡಿರಣ್ಣನ ಉತ್ಸವ: ಮೇ 2ರಂದು ಸಂಜೆ 4 ಗಂಟೆಗೆ ಶ್ರೀ ಮದ್ದೂರಮ್ಮ ದೇವಸ್ಥಾನ ಆವರಣದಲ್ಲಿ ಸಿಡಿರಾಯಣ್ಣ ಉತ್ಸವ ನೆರವೇರಲಿದೆ. ಉತ್ಸವಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.