ಬಸವಕಲ್ಯಾಣ: ಜಾತ್ರೆಗಳು, ಉತ್ಸವಗಳು, ಹಬ್ಬ ಹರಿದಿನಗಳು ಮನುಷ್ಯನ ಕಲಾತ್ಮಕ ಬದುಕಿಗೆ ಪೂರಕವಾಗಿದ್ದು, ಅಧ್ಯಾತ್ಮಿಕ ಹಂದರ ರೂಪಿಸಿ ಕೊಡುತ್ತವೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಮೈಸಲಗಾ ಗ್ರಾಮದ ಶ್ರೀ ಲಕ್ಷ್ಮಿ ಮಾತೆಯ ೧೨ನೇ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇಡೀ ವರ್ಷ ನೋವು ನಲಿವುಗಳ ಹೊಯ್ದಾಟದಲ್ಲಿ ಬಳಲಿದ ಮನಸ್ಸಿಗೆ ಧರ್ಮಕಾರ್ಯಗಳು ನೆಮ್ಮದಿಯ ಸಿಂಚನ ನೀಡುತ್ತವೆ ಎಂದರು.
ಶ್ರೀ ಲಕ್ಷ್ಮಿ ಮಾತೆಯ ದೇವಸ್ಥಾನ ಚೈತನ್ಯದ ಕೇಂದ್ರವಾಗಿದ್ದು, ದೇವಿಯ ಆರಾಧನೆ ಹಾಗೂ ದುಡಿಮೆಯಿಂದ ಬದುಕಿಗೆ ಹೊಸ ಹೊಳಪು ಬರುತ್ತದೆ. ಸತ್ಯ ಶುದ್ಧ ಶ್ರಮಕ್ಕೆ ಲಕ್ಷ್ಮೀ ದೇವಿಯ ಕೃಪಾಶೀರ್ವಾದ ಇರುತ್ತದೆ ಎಂಬುವುದು ಸಾರ್ವಕಾಲಿಕ ಸತ್ಯದ ಮಾತಾಗಿದೆ. ಪ್ರತಿ ಧರ್ಮಚರಣೆಗಳು ಬದುಕನ್ನು ಕುರಿತು ಮಾತಾಡುವಂತಿರಬೇಕು, ನೈಜ ನೆಲೆ ಗಟ್ಟಿಗೊಳಿಸುವಂತಿರಬೇಕು. ಲಕ್ಷ್ಮಿ ಮಾತೆಯ ದಿವ್ಯ ಕೃಪೆಗೆ ಪಾತ್ರರಾಗಬೇಕಾದರೆ, ಪರಿಶ್ರಮ ಬದುಕಿನ ಮೂಲ ಮಂತ್ರ ವಾಗಬೇಕು. ಮೈಸಲಗಾ ಗ್ರಾಮ ಐಶ್ವರ್ಯ ಧಾಮವಾಗಿ ಸರ್ವರು ಸೌಖ್ಯದಿಂದ ಬಾಳಲಿ ಎಂದು ಶುಭ ಹಾರೈಸಿದರು.
ಬಬಲಾದನ ಶ್ರೀ ಗುರುಪಾದಲಿಂಗ ಮಹಾಸ್ವಾಮೀಜಿ, ಖೇಳಗಿಯ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಮಳಖೇಡ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು , ಜಗನ್ನಾಥ ದೊವೆ, ಮಲ್ಲಿನಾಥ ಹಿರೇಮಠ ಹಾರಕೂಡ, ಶಿವಕುಮಾರ ಶಾಸ್ತ್ರಿಗಳು, ಶಿವಶರಣಯ್ಯ ಕಂಬಳಿಮಠ, ಗುರುಲಿಂಗಪ್ಪ ಸೈದಾಪುರೆ, ರೇವಣಸಿದ್ದಪ್ಪ ಅಟ್ಟೂರ, ಗುಂಡೇರಾವ ಬಿರಾದಾರ ಭೀಮಶಂಕರ ಮಾಲಿ ಪಾಟೀಲ್, ರೇಣುಕಾ ನೀಲೆ, ಶಾಂತಾಬಾಯಿ ರಾಠೋಡ್, ಸುಧಾಮ ಜಾಧವ್, ಸಿದ್ದಾರೂಡ ಬಿರಾದಾರ, ಬಸವರಾಜ ಕಲಶೆಟ್ಟಿ ಇತರರಿದ್ದರು.
ಗುಂಡಪ್ಪ ಪಾಟೀಲ್ ಯಳವಂತಗಿ ಸ್ವಾಗತಿಸಿ ನಿರೂಪಣೆ ಮಾಡಿದರು. ಕಲ್ಲಿನಾಥ ಗವಾಯಿ ಹಿತ್ತಲ ಶಿರೂರ ಪ್ರಾರ್ಥನ ಗೀತೆ ನಡೆಸಿಕೊಟ್ಟರು.