ಹರಪನಹಳ್ಳಿ: ಶ್ರೀ ಕೃಷ್ಣ ಕೇವಲ ಯಾದವ ಸಮುದಾಯಕ್ಕೆ ಸೀಮಿತರಲ್ಲ. ಸರ್ವಧರ್ಮದವರು ಪೂಜಿಸಿ ಆರಾಧಿಸುತ್ತಾರೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ನಟರಾಜ ಕಲಾಭವನದಲ್ಲಿ ತಾಲೂಕು ಯಾದವ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ, ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಂದು ಸಮುದಾಯದ ಆಚಾರ, ವಿಚಾರ ತಿಳಿದುಕೊಳ್ಳಬೇಕು. ಸರ್ಕಾರಿ ಸೌಲಭ್ಯ ಬಳಸಿಕೊಂಡು ಅಭಿವೃದ್ಧಿ ಹೊಂದಲು ಮುಂದಾಗಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಸಮುದಾಯಕ್ಕೆ 2ಎಕರೆ ಜಮೀನು ಸೇರಿ ಇತರೆ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಮಾತನಾಡಿ, ಯಾದವ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಬೇಕು. ಈಗಾಗಲೆ ಸಿಎಂ ಸಿದ್ದರಾಮಯ್ಯಗೆ ಮೀಸಲಾತಿ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕುಲಶಾಸ್ತ್ರ ಅಧ್ಯಯನಕ್ಕೆ ಸೂಚಿಸಿದ್ದಾರೆ. ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಶಾಸಕರು ಮುಖ್ಯಮಂತ್ರಿಗೆ ಮನವಿ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಯಾದವ ಸಂಘದಿಂದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನಗೆ ಹರಪನಹಳ್ಳಿಯಲ್ಲಿ 2 ಎಕರೆ ಜಮೀನು, ವಸತಿ ನಿಲಯ, ಸಮುದಾಯ ಭವನ ನಿರ್ಮಿಸುವಂತೆ ಮನವಿ ಸಲ್ಲಿಸಲಾಯಿತು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು. ಚಿತ್ರದುರ್ಗದ ಅಖಿಲ ಭಾರತ ಯಾದವ ಮಹಾಸಂಸ್ಥಾನದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ನಿವೃತ್ತ ಕನ್ನಡ ಉಪನ್ಯಾಸಕ ಎಂ.ಪಿ.ಎಂ.ಶಾಂತವೀರಯ್ಯ ವಿಶೇಷ ಉಪನ್ಯಾಸ ನೀಡಿದರು.
ಯಾದವ ಸಮುದಾಯದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ, ಬಸವರಾಜ ಮಾತನಾಡಿದರು. ತಹಸೀಲ್ದಾರ್ ಗಿರೀಶಬಾಬು, ಪ್ರಮುಖರಾದ ಮತ್ತೂರು ಪ್ರಕಾಶ, ವೀರಣ್ಣ, ಮತ್ತೂರು ಬಸವರಾಜ, ರವೀಂದ್ರ, ಬಸಪ್ಪ, ಶ್ರೀಕಾಂತ, ಗಗನ, ಎಸ್.ಸೋಮಪ್ಪ, ಎನ್.ಜಿ.ಬಸವರಾಜ, ಎನ.ಮಹೇಶಪ್ಪ ಇದ್ದರು.