ಜಿಲ್ಲೆ

ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಖರೀದಿ ಜೋರು

reportermng

ಮಂಗಳೂರು: ಹಬ್ಬಗಳ ಸರಣಿ ಆರಂಭವಾಗಿದ್ದು, ಎರಡು ವಾರಗಳ ಹಿಂದಷ್ಟೇ ನಾಗರ ಪಂಚಮಿ ಸಂಭ್ರಮ ಸಡಗರದಿಂದ ಆಚರಿಸಲ್ಪಟ್ಟಿದ್ದು, ಇದೀಗ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವದ ಸರದಿ.
ಗುರುವಾರ ಎಲ್ಲೆಡೆ ಜನ್ಮಾಷ್ಟಮಿ ಆಚರಣೆಯಾಗಲಿದ್ದು, ದೇವಳ, ಮಂದಿರ, ಮನೆಗಳಲ್ಲಿ ಆಚರಣೆಗೆ ಸಿದ್ಧತೆ ನಡೆದಿದೆ. ಮಂಗಳೂರಿನ ಕೊಡಿಯಾಲ್ ಬೈಲ್ ಪಿವಿಎಸ್ ಕಲಾಕುಂಜ, ನಂತೂರು, ಕುಡುಪು ಇಸ್ಕಾನ್ ಮಂದಿರ, ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನ ಸೇರಿದಂತೆ ವಿವಿಧೆಡೆ ಶ್ರೀಕೃಷ್ಣನ ಜನ್ಮಾಷ್ಟಮಿಯ ಸಂಭ್ರಮದ ಆಚರಣೆ ಜರುಗಲಿದೆ. ಕಳೆದ ವರ್ಷ ಸರಳವಾಗಿ ಆಚರಣೆಯಾಗಿದ್ದ ಹಬ್ಬ ಈ ಬಾರಿ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಕಳೆಕಟ್ಟಲಿದೆ. ದೇವಳಲ್ಲಿ ರಾತ್ರಿ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ, ಇಸ್ಕಾನ್ ಮಂದಿರಗಳಲ್ಲಿ ತೊಟ್ಟಿಲು ಸೇವೆ, ಅಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ಆನ್‌ಲೈನ್‌ನಲ್ಲಿ ನಡೆಯುತ್ತಿದ್ದ ಕೃಷ್ಣ ವೇಷ ಸ್ಪರ್ಧೆಗಳು ಎರಡು ವರ್ಷಗಳ ಬಳಿಕ ಸಾರ್ವಜನಿಕವಾಗಿಯೇ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಮಕ್ಕಳ ಉತ್ಸವ ಕೃಷ್ಣ ವೇಷ ಸ್ಪರ್ಧೆಯ ಮೂಲಕ ಕದ್ರಿ ದೇವಳದಲ್ಲಿ ಈ ಬಾರಿ ಮತ್ತೆ ಮಕ್ಕಳ ಕಲರವ ಕೇಳಿ ಬರಲಿದೆ. ಸಂಘ ಸಂಸ್ಥೆಗಳು, ಭಜನಾ ಮಂದಿರಗಳ ವತಿಯಿಂದಯೂ ಎರಡು ವರ್ಷದ ಬಳಿಕ ಮೊಸರು ಕುಡಿಕೆ ಉತ್ಸವ ಆಯೋಜನೆಗೊಳ್ಳಲಿದ್ದು, ಈಗಲೇ ಗುರ್ಜಿಗಳನ್ನು ಕಟ್ಟಿ ಸಿದ್ಧಪಡಿಸುವ ಕೆಲಸ ಪೂರ್ಣಗೊಂಡಿದೆ. ಮಂಗಳೂರಿನ ವಿವಿಧ ಮಾರುಕಟ್ಟೆಗಳಲ್ಲಿ ತರಕಾರಿ, ಹೂವು, ಹಣ್ಣು ಖರೀದಿ ಬುಧವಾರ ಜೋರಾಗಿಯೇ ನಡೆಯಿತು. ಬೆಳಗ್ಗಿನಿಂದಲೇ ವ್ಯಾಪಾರ ವಹಿವಾಟು ಆರಂಭವಾಗಿದ್ದು, ಸಂಜೆ ವೇಳೆ ಹೆಚ್ಚು ಜನದಟ್ಟಣೆ ಕಂಡು ಬಂತು. ಹೊರ ಜಿಲ್ಲೆಗಳಿಂದ ಹೂವಿನ ವ್ಯಾಪಾರಿಗಳೂ ಆಗಮಿಸಿದ್ದು, ಮಿನಿ ವಿಧಾನಸೌಧ ಬಳಿ, ಪುರಭವನ ಮುಂಭಾಗ, ಮೈದಾನ ರಸ್ತೆ, ಸ್ಟೇಟ್‌ಬ್ಯಾಂಕ್, ಕೆಎಸ್ಸಾರ್ಟಿಸಿ ರಸ್ತೆ ಮೊದಲಾದೆಡೆ ಮಾರಾಟದಲ್ಲಿ ತೊಡಗಿದ್ದರು. ಸೇವಂತಿಗೆ ಮಾರ್ ಒಂದಕ್ಕೆ 100-150 ರೂ, ತುಳಸಿ ಮಾಲೆ ಮೊಳಕ್ಕೆ 50-60 ರೂ.ನಲ್ಲಿ ಮಾರಾಟವಾಗಿದೆ. ಬಯಲು ಸೀಮೆ ಭಾಗದಲ್ಲಿ ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿಲ್ಲ. ಹಾಗಾಗಿ ಬೆಲೆಯಲ್ಲಿ ಏರಿಕೆ ಮಾಡಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ಕರಾವಳಿಯಲ್ಲಿ ಅಷ್ಟಮಿಯ ಪ್ರಮುಖ ಖಾದ್ಯವಾಗಿರುವ ‘ಮೂಡೆ’ ತಯಾರಿಸಲು ಬೇಕಾಗುವ ಮೂಡೆ ಎಲೆಗೆ ಭಾರಿ ಬೇಡಿಕೆ ಇದೆ. ನಗರದ ರಥಬೀದಿ ಪ್ರದೇಶದಲ್ಲಿ ಸ್ಥಳದಲ್ಲಿಯೇ ಮೂಡೆ ಎಲೆ ತಯಾರಿಸಿ ಕೊಡುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ವ್ಯಾಪಾರಿಗಳು ಬಂದಿರುವುದರಿಂದ ಪೈಪೋಟಿ ಹೆಚ್ಚಾಗಿದ್ದು, ಸದ್ಯ ಬೆಲೆ ಕಳೆದ ವರ್ಷದಷ್ಟೇ ಇದೆ. 100 ರೂಪಾಯಿಗೆ ದೊಡ್ಡ ಗಾತ್ರದ್ದಾದರೆ 4,ಚಿಕ್ಕದಾದರೆ 6-10ರ ವರೆಗೆ ಮಾರಾಟವಾಗಿದೆ.