ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪೂರ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿರುವ ಸೇವಾ ಭಾರತಿ ಟ್ರಸ್ಟ್‌ನ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಹೆಗ್ಗೇರಿ ಆಯುರ್ವೇದ ಕಾಲೇಜ್‌ನ ಡಾ. ಪೂರ್ಣಿಮಾ ಮಾತನಾಡಿ, ವಿಷ್ಣುವಿನ 8ನೇ ಅವತಾರವಾಗಿರುವ ಶ್ರೀಕೃಷ್ಣ, ಬಾಲ್ಯದ ದಿನಗಳಲ್ಲಿ ಕಷ್ಟಗಳನ್ನು ಅನುಭವಿಸಿ, ಗೋಪಾಲಕನಾಗಿ ಗೋಕುಲವನ್ನು ರಂಜಿಸಿ, ಇಡೀ ಭರತ ಖಂಡದ ಪ್ರಭಾವಿಯಾಗಿ ಬೆಳೆದ. ಶ್ರೀಕೃಷ್ಣ ತಾನು ನಂಬಿದ್ದ ಧರ್ಮ ಕಾರಣದ ಮೌಲ್ಯಗಳನ್ನು ಜತನದಿಂದ ಕಾಪಿಟ್ಟುಕೊಳ್ಳುವುದಕ್ಕೆ, ಧರ್ಮವನ್ನು ಎತ್ತಿ ಹಿಡಿಯಬೇಕೆಂಬ ಒಂದೇ ಉದ್ದೇಶದಿಂದ ಆತ ರಚಿಸದ ವ್ಯೆಹಗಳಿಲ್ಲ, ಹೆಣೆಯದ ತಂತ್ರಗಳಿಲ್ಲ. ಈ ವಿಶೇಷ ಗುಣ ಗಮನದಲ್ಲಿಟ್ಟುಕೊಂಡೇ, ತ್ಯಾಗರಾಜರು ತಮ್ಮ ಕೀರ್ತನೆಯೊಂದರಲ್ಲಿ ಬೋಧಿಸಿದ ಸನ್ಮಾರ್ಗಗಳನ್ನು ತಾನೇ ಮುರಿದು, ಹಿಡಿದ ಹಠ ಸಾಧಿಸಿದ ಎಂದು ವರ್ಣಿಸಿದ್ದಾರೆ. ಹಾಗಾಗಿಯೇ ಎಲ್ಲವನ್ನೂ ಅರಿತ ಆತನನ್ನು ‘ಕೃಷ್ಣಂ ವಂದೇ ಜಗದ್ಗುರುಂ’ ಎಂದು ಹೇಳುತ್ತೇವೆ ಎಂದರು.
ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಿ ನಂದಕುಮಾರ ಸ್ವಾಗತಿಸಿದರು. ರತ್ನಾ ಮಾತಾಜಿ ವಂದಿಸಿದರು.
ಶ್ರೀ ಕೃಷ್ಣನಿಗೆ ಸುವಿಸ್ತಾರ ಅಭಿಷೇಕ, ಆರತಿ, 108 ಸಿಹಿ ತಿಂಡಿಗಳು, ಉಯ್ಯಲೆ ಮತ್ತಿತರ ಸೇವೆಗಳನ್ನು ಸಲ್ಲಿಸಲಾಯಿತು. ಬೆಣ್ಣೆ ಮತ್ತು ಸಕ್ಕರೆ ಸೇರಿ ವಿಶೇಷ ತಿನಿಸುಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸಲಾಯಿತು. ಶ್ರೀ ಕೃಷ್ಣನ ಲೀಲೆ ಆಧರಿಸಿದ ಸಂಗೀತ, ನೃತ್ಯ ಸೇವೆಗಳನ್ನು ಭಕ್ತರು ಅರ್ಪಿಸಿದರು. ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣ ವೇಷಭೂಷಣ ತೊಡಿಸಲಾಗಿತ್ತು. ಸೇವಾ ಸದನದ ಮಕ್ಕಳಿಂದ ನಡೆದ ಶ್ರೀಕೃಷ್ಣನ ರೂಪಕಗಳು ನೆರೆದಿದ್ದ ಜನಮನ ಸೂರೆಗೊಂಡವು.