ಜಿಲ್ಲೆ

ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ಚಿಕ್ಕಮಗಳೂರು: ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು.
ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಜಿಲ್ಲಾಡಳಿತದ ಆದೇಶದಂತೆ ಕರೊನಾ ನಿಯಮ ಪಾಲನೆ ಮಾಡಿ ಗ್ರಾಮ ಪ್ರದಕ್ಷಿಣೆ ಹಾಕಲಾಯಿತು. ಬೆಳಗ್ಗೆ ದೇವಾಲಯದ ಧಾರ್ಮಿಕ ವಿಧಿಯಂತೆ ಸುಪ್ರಭಾತ, ಶ್ರೀ ಕೋದಂಡರಾಮಚಂದ್ರ ಸ್ವಾಮಿಗೆ ಕನ್ನಡ ಪೂಜೆ, ವಿಶೇಷ ಅಲಂಕಾರ, ಸಾಮೂಹಿಕ ಭಜನೆ ಸಲ್ಲಿಸಲಾಯಿತು.

ಪ್ರತಿಷ್ಠಾಪನೆ-ವಿಶೇಷ ಪೂಜೆ:
ನರಸಿಂಹಸ್ವಾಮಿ ಗುಡಿ ಮುಂದೆ ಸೀತಾರಾಮರ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ಅರ್ಚಕ ವೈಷ್ಣವಸಿಂಹ ತಂಡದವರು ವಿಶೇಷ ಪೂಜೆ, ಮಂಗಳಾರತಿ ಮಾಡಿದರು. ಉದಯಸಿಂಹ ನೇತೃತ್ವದಲ್ಲಿ ಮಹಿಳೆಯರು ಭಜನೆ ಮಾಡಿದ ನಂತರ ಉತ್ಸವಮೂರ್ತಿ ಹೊತ್ತು ದೇವಾಲಯ ಪ್ರದಕ್ಷಿಣೆ ಹಾಕಿ ರಥದಲ್ಲಿ ಕುಳ್ಳಿರಿಸಲಾಯಿತು. ಮಧ್ಯಾಹ್ನ ನಾದಸ್ವರ ವಾದ್ಯಗಳೊಂದಿಗೆ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿ ಭಕ್ತರು ರಥ ಎಳೆದು ಉಘೇ ಉಘೇ ಎಂದು ಘೋಷಣೆ ಮೊಳಗಿಸಿದರು. ರಥ ಸಾಗುವ ಮಾರ್ಗದುದ್ದಕ್ಕೂ ಗ್ರಾಮಸ್ಥರು ಅಲ್ಲಲ್ಲಿ ನಿಂತು ಹೂವು ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸಿದರೆ ಬಹಳಷ್ಟು ಭಕ್ತರು ದೇವರಿಗೆ ಬಾಳೆಹಣ್ಣು ಉಗ್ಗಿ ಸಂಪ್ರದಾಯ ನೆರವೇರಿಸಿದರು.

ರಥಕ್ಕೆ ಬೃಹತ್ ಮಾಲಾರ್ಪಣೆ:
ಬಂಡಿಹಳ್ಳಿ, ಲಕ್ಷ್ಮೀಪುರ, ಮರ್ಲೆ, ಹಿರೇಮಗಳೂರು, ಚಿಕ್ಕಮಗಳೂರು, ಬೆಂಗಳೂರು, ಮೈಸೂರು ಸೇರಿ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಭಕ್ತರಿಗೆ ಪೂಜೆ, ಪ್ರಾರ್ಥನೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸ್ಥಳೀಯ ಯುವಕ ಸಂಘದ ಕಾರ್ಯಕರ್ತರು ರಥಕ್ಕೆ ಬೃಹತ್ ಮಾಲಾರ್ಪಣೆ ಮಾಡಿದರು. ಮುಖ್ಯರಸ್ತೆಯವರೆಗೂ ರಥ ಎಳೆದು ಸಂಜೆ ರಥವನ್ನು ದೇವಾಲಯ ಆವರಣಕ್ಕೆ ತಂದು ಕುಂಕುಮಾರ್ಚನೆ ನೆರವೇರಿಸಲಾಯಿತು. ಪೌರಾಯುಕ್ತ ಬಿ.ಸಿ.ಬಸವರಾಜು, ದೇವಾಲಯ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಕರೊನಾ ನಿಯಮ ಪಾಲನೆ ಪ್ರಮಾಣ:
ಮನೆ ಮನಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುತ್ತೇವೆ, ಲಸಿಕೆ ಹಾಕಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ, ಮಾಸ್ಕ್ ಧರಿಸುವುದೂ ಸೇರಿ ಕರೊನಾ ನಿಯಮ ಪಾಲನೆ ಮಾಡುತ್ತೇವೆಂದು ರಥದ ಮುಂದೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಬೋಧಿಸಿದ ಪ್ರಮಾಣವಚನಕ್ಕೆ ಭಕ್ತರು ಧ್ವನಿಗೂಡಿಸಿ ಸಂಕಲ್ಪ ಮಾಡಿದರು.