ತಿ.ನರಸೀಪುರ : ಮಹಾಶಿವರಾತ್ರಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ಶಿವನ ದೇವಾಲಯಗಳಲ್ಲಿ ಬುಧವಾರ ವಿಶೇಷ ದರ್ಶನ, ಪೂಜೆ ಜರುಗಿತು.
ತಾಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿರುವ ಶ್ರೀ ಗರ್ಗೇಶ್ವರ ಸ್ವಾಮಿಗೆ ಮುಂಜಾನೆಯೇ ಅರ್ಧಭಾಗ ವಿಭೂತಿ, ಇನ್ನರ್ಧಭಾಗ ಅರಿಶಿಣದಿಂದ ಅಲಂಕರಿಸಿ ಅಧರ್ನಾರೀಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಪಟ್ಟಣದ ಹಳೇ ಸಂತೆಮಾಳದಲ್ಲಿರುವ ಅನಾದಿ ಶ್ರೀ ಮೂಲ ಸ್ಥಾನೇಶ್ವರಸ್ವಾಮಿ ದೇವಾಲಯದಲ್ಲಿ ನಾಗರ ಎಡೆಯ ಹೂವಿನ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ಶ್ರೀ ಶಿವಕಾಮ ಸುಂದರಮ್ಮ ದೇವಸ್ಥಾನದಲ್ಲಿಯೂ ವಿಶೇಷ ಪೂಜಾ ಕಾರ್ಯ ನೆರವೇರಿತು. ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿಯೂ ಅಭಿಷೇಕ ಹಾಗೂ ರುದ್ರಭಿಷೇಕ ನಡೆಯಿತು.
ತಾಲೂಕಿನ ಸೋಮಶೈಲ ಕ್ಷೇತ್ರ ಮುಡುಕುತೋರೆಯಲ್ಲಿರುವ ಶ್ರೀ ಭ್ರಮರಾಂಬ ಶ್ರೀೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ ವಿಶೇಷ ಪೂಜೆ ಕಾರ್ಯಗಳು ಸಾಂಗವಾಗಿ ನಡೆಯಿತು. ಬೆಳಗ್ಗೆಯಿಂದಲೂ ದೇವಾಲಯಕ್ಕೆ ದೌಡಾಯಿಸಿದ ಭಕ್ತರು ಸಾರಿನಲ್ಲಿ ನಿಂತು ದೇವರ ದರ್ಶನವನ್ನು ಪಡೆದು, ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.