ಜಿಲ್ಲೆ

ಶ್ರೀ ದುರ್ಗಾ ದೇವಿ ಅದ್ಧೂರಿ ಮೆರವಣಿಗೆ

ಜಿ.ಹೆಚ್. ಧನ್ಯಕುಮಾರ್

ಕಳಸ: ಕಳಸ ಸಾರ್ವಜನಿಕ ಶ್ರೀದುರ್ಗಾಪೂಜಾ ಸಮಿತಿಯಿಂದ ನಡೆದ 37ನೇ ವರ್ಷದ ಸಾರ್ವಜನಿಕ ಶ್ರೀದುರ್ಗಾ ಪೂಜಾ ಮಹೋತ್ಸವದಲ್ಲಿ ಶ್ರೀದುರ್ಗಾ ದೇವಿ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಪ್ರತಿ ವರ್ಷ ನವರಾತ್ರಿ ಉತ್ಸವದ ಅಂತ್ಯಕ್ಕೆ ದೇವಿ ವಿಸರ್ಜನೆ ಮೆರವಣಿಗೆಯು ಒಂದು ಭಕ್ತಿಯ ಉತ್ಸವವಾಗಿ ಮಾರ್ಪಡುತ್ತದೆ. ಮೆರವಣಿಗೆಯಲ್ಲಿ ನಾಸಿಕ್ ಡೋಲ್, ಚಂಡೆ, ವಿವಿಧ ವಿಶೇಷಕಲಾತ್ಮಕ ನೃತ್ಯಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿ ನಿಂತವು. ಭಕ್ತರು ದುರ್ಗಾ ಮಾತಾ ಕೀ ಜೈ ಘೋಷಣೆಗಳನ್ನು ಕೂಗಿದರು. ದುರ್ಗಾ ಮಂಟಪದಿಂದ ಹೊರಟ ಮೆರವಣಿಗೆ ಕಳಸದ ಪ್ರಮುಖ ಮುಖ್ಯ ರಸ್ತೆಯ ಮೂಲಕ ಸಾಗಿತು. ವಿಶೇಷ ಅಲಂಕಾರ ಹಾಗೂ ಬೆಳಕುಗಳಿಂದ ದೀಪಾಲಂಕೃತ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಹಾಗೂ ಪ್ರವಾಸಿಗರು ಈ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಸ್ಥಳೀಯ ಯುವಕರು ಮೆರವಣಿಗೆ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪೊಲೀಸ್ ಇಲಾಖೆ ಹಾಗೂ ಸ್ವಯಂ ಸೇವಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮೆರವಣಿಗೆ ಅಂತ್ಯದಲ್ಲಿ ಶ್ರೀದುರ್ಗಾ ದೇವಿ ಮೂರ್ತಿಯನ್ನು ಭದ್ರಾ ನದಿಯ ಕೋಟಿ ತೀರ್ಥದಲ್ಲಿ ತೆಪ್ಪೋತ್ಸವ ನಡೆಸಿ ನಂತರ ವಿಸರ್ಜಿಸಲಾಯಿತು.