ಜಿಲ್ಲೆ

ಹೊಸತನಕ್ಕೆ ನಾಂದಿಯಾದ ಶ್ರೀ ಅನ್ನದಾನೇಶ್ವರ ‘ಅಕ್ಷರ ಜಾತ್ರೆ’

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಜಾತ್ರೆ ಎಂದರೆ ಮೋಜು, ತರಹೇವಾರಿ ತಿನಿಸುಗಳ ಆಸ್ವಾದನೆ, ಮನರಂಜನೆಯೇ ಮುಖ್ಯ ಉದ್ದೇಶ ಎನ್ನುವುದು ಸಾಮಾನ್ಯದ ಮಾತು. ಅದನ್ನು ಹೊರತುಪಡಿಸಿ ಜಾತ್ರೆಯನ್ನು ಜನಜಾಗೃತಿಗೂ ಸಹಕಾರಿ ಎಂಬುದನ್ನು ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ‘ಅಕ್ಷರ ಜಾತ್ರೆ’ ತೋರಿಸಿಕೊಟ್ಟಿದೆ.
ಹಾಲಕೆರೆಯ ಶ್ರೀಮಠಕ್ಕೆ 500ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಶ್ರೀಮಠದ ಲಿಂ. ಹಿರಿಯ ಅನ್ನದಾನ ಸ್ವಾಮೀಜಿಗಳ 111ನೇ ಪುಣ್ಯಸ್ಮರಣೋತ್ಸವ, ಲಿಂ.ಡಾ. ಅಭಿನವ ಅನ್ನದಾನ ಸ್ವಾಮೀಜಿಗಳ ದ್ವಿತೀಯ ಪುಣ್ಯಸ್ಮರಣೋತ್ಸವ ಹಾಗೂ ಶ್ರೀಮಠದ 173ನೇ ಮಹಾರಥೋತ್ಸವ ಅಂಗವಾಗಿ ಜ. 13, 14ರಂದು ಜರುಗಿದ ‘ಅಕ್ಷರ ಜಾತ್ರೆ’ ಶ್ರೀಮಠದ ಮತ್ತೊಂದು ಇತಿಹಾಸ.

ಜಾತ್ರೆಯಲ್ಲಿ ಜನಜಾಗೃತಿ: ಶ್ರೀ ಮಠದ 8ನೇ ಪೀಠಾಧಿಪತಿಗಳಾದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಮಕ್ಕಳಿಗೆ ಅನ್ನ ಮತ್ತು ಅಕ್ಷರದ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಅಕ್ಷರ ಜಾತ್ರೆ ಹಮ್ಮಿಕೊಂಡಿದ್ದರು. ಅಕ್ಷರದ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಕಲ್ಪಿಸಿದ್ದರು. ಮಠದ ಎಸ್‌ಎವಿವಿಪಿ ಸಮಿತಿಯ ಅಂಗ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಅಕ್ಷರ ಜಾತ್ರೆಗಾಗಿ ತರಹೇವಾರಿ, ಕೌಶಲ-ನೈಪುಣ್ಯದ ಪ್ರದರ್ಶನ ನೀಡಿದರು. 10ಕ್ಕೂ ಅಧಿಕ ಮಳಿಗೆ ಸ್ಥಾಪಿಸಿ, ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲಾಗಿತ್ತು.
ಪ್ರತಿಭೆಗಳಿಗೆ ವೇದಿಕೆ: ಐಟಿಐ ವಿದ್ಯಾರ್ಥಿಗಳು ರಾಶಿ ತುಂಬಲು ಸುಲಭವಾದ ಯಂತ್ರ, ನರೇಗಲ್ಲ, ನಿಡಗುಂದಿಯ ಅನ್ನದಾನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ತಯಾರಿಸಿದ ಕರಕುಶಲ ವಸ್ತುಗಳು, ವಿಜ್ಞಾನದ ಆವಿಷ್ಕಾರಗಳನ್ನು ಮನಮುಟ್ಟುವಂತೆ ಜಾತ್ರೆಗೆ ಬಂದವರಿಗೆ ವಿವರಿಸಿದರು. ಸಾವಯವ ಕೃಷಿ, ತೋಟಗಾರಿಕೆ, ರಸಗೊಬ್ಬರ ತಯಾರಿಕೆ, ಮಣ್ಣಿನ ಫಲವತ್ತತೆ ಹೆಚ್ಚಳದ ಕ್ರಮಗಳು, ಪಿಯು ವಿದ್ಯಾರ್ಥಿನಿಯರಿಂದ ಆಹಾರ- ವಿಹಾರ ವಿಶೇಷ ಖಾದ್ಯ ತಯಾರಿಕೆ ಸೇರಿ ಹತ್ತಾರು ಗಣಿತ, ವಿಜ್ಞಾನ ವಸ್ತುಪ್ರದರ್ಶನ ನೋಡುಗರನ್ನು ಬೆರಗು ಮೂಡಿಸಿತು. ಇಂತಹ ವಿನೂತನ ಅಕ್ಷರ ಜಾತ್ರೆಯನ್ನು ವೀಕ್ಷಿಸಲು ಸುತ್ತಲಿನ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು ಆಗಮಿಸಿದ್ದರು.
ಗದಗ- ವಿಜಯಪುರ ರಾಮಕೃಷ್ಣ- ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಬಾಗಲಕೋಟೆಯ ಶ್ರೀ ಬಸವೇರ್ಶವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸೇರಿ ನಾಡಿನ ಅನೇಕ ಅನುಭಾವಕರ ಅನುಭವದ ನುಡಿಗಳನ್ನು ಕೇಳಿದ ಧನ್ಯತೆ ವಿದ್ಯಾರ್ಥಿಗಳಾದ್ದಗಿತ್ತು.

ಶ್ರೀಮಠದ ಅಧಿಕಾರ ವಹಿಸಿಕೊಂಡು ಎರಡು ವರ್ಷ ಕಳೆದಿದ್ದು, ಶ್ರೀಮಠದ ಎಲ್ಲ ಶಾಖಾ ಮಠಗಳಿಗೂ ನಿರಂತರ ಭೇಟಿ ನೀಡಿ ಭಕ್ತರಲ್ಲಿ ನೆಲ-ಜಲದ ಜಾಗೃತಿ ಕೈಗೊಳ್ಳಲಾಯಿತು. ಅದರ ಪರಿಣಾಮ ತೃಪ್ತಿದಾಯಕವಾಗಲಿಲ್ಲ. ಆದ್ದರಿಂದ, ನಾವು ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂಬ ಬಯಕೆ ನಮ್ಮಲ್ಲಿ ಮೂಡಿತು. ಆದ್ದರಿಂದಲೇ, ಅಕ್ಷರ ಎಂಬ ಜಾಗೃತಿ ಜಾತ್ರೆಯನ್ನು ಹಮ್ಮಿಕೊಳ್ಳಲಾಯಿತು. ಭಗವಂತನ ಸೃಷ್ಟಿಯಲ್ಲಿನ ವಸ್ತುಗಳ ಪಾವಿತ್ರೃ ಉಳಿಸುವ ಕೆಲಸವಾಗಬೇಕು. ನಾವು ಸೇವಿಸುವ ಗಾಳಿ, ನೀರು ಕಲುಷಿತವಾಗದಂತೆ ರಕ್ಷಿಸುವ ಕಾರ್ಯವಾಗಬೇಕು. ಆಗಮಾತ್ರ ಮನುಷ್ಯ ಉಳಿಯಲು ಸಾಧ್ಯ. ಜಾತ್ರೆಯ ಮೂಲಕ ಈ ಸತ್ಯವನ್ನು ತಿಳಿಸುವ ಕಾರ್ಯಮಾಡಲಾಗುತ್ತಿದೆ.-ಮುಪ್ಪಿನ ಬಸವಲಿಂಗ ಸ್ವಾಮೀಜಿ, ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ-ಗಂಜಿಹಾಳ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳ ಪರಿಕಲ್ಪನೆಯ ಅಕ್ಷರ ಜಾಾತ್ರೆ ಸಂಪೂರ್ಣ ಯಶಸ್ವಿಯಾಗಿದೆ. ಇದು ಪ್ರಾರಂಭವಷ್ಟೇ ಇನ್ನುಮುಂದೆ ಹತ್ತಾರು ಯೋಜನೆಗಳಿವೆ. ಶ್ರೀಗಳ ಮಾರ್ಗದರ್ಶನದಂತೆ ಮುಂದಿನ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಆ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕನಸನ್ನು ಸಾಕಾರಗೊಳಿಸುವ ಪ್ರಯತ್ನ ಮುಂದುವರಿಯಲಿದೆ.-ವೈ.ಸಿ. ಪಾಟೀಲ ಪ್ರಾಚಾರ್ಯರು, ಎಸ್.ಎ. ಪದವಿಪೂರ್ವ ಕಾಲೇಜು ನರೇಗಲ್ಲ