ಜಿಲ್ಲೆ

ಶ್ರೇಯಶ್ರಿಗೆ ಬೇಕಿದೆ ನೆರವಿನ ಹಸ್ತ: ಲಿವರ್ ಶಸ್ತ್ರಚಿಕಿತ್ಸೆಗೆ 27 ಲಕ್ಷ ರೂ ಅವಶ್ಯ

ಕೆ.ಎನ್.ರಾಘವೇಂದ್ರ

ಮಂಡ್ಯ: ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಶ್ರೇಯಶ್ರಿಗೆ ಶಸ್ತ್ರಚಿಕಿತ್ಸೆಗೆ ಹಣದ ಅವಶ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೆರವು ನೀಡುವಂತೆ ಪಾಲಕರು ದಾನಿಗಳ ಮೊರೆ ಹೋಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವತಿಯ ತಂದೆ ಶೇಖರ್, ಕಳೆದ ವರ್ಷ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಲಿವರ್‌ನಲ್ಲಿ ಸಮಸ್ಯೆ ಕಂಡು ಬಂದಿದೆ. ಬೆಂಗಳೂರಿನ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈವರೆಗೆ ಸಾಲ ಮಾಡಿ 20 ಲಕ್ಷ ರೂ.ಗಳಷ್ಟು ವೈದ್ಯಕೀಯ ವೆಚ್ಚ ಭರಿಸಿದ್ದೇವೆ. ಇದೀಗ ಲಿವರ್ ಕಸಿ ಮಾಡಲು ವೈದ್ಯರು ಸೂಚಿಸಿದ್ದು, 27 ಲಕ್ಷ ರೂ ಅವಶ್ಯತೆ ಇದೆ ಎಂದರು.

ಮಗಳಿಗೆ ಈ ಸಮಸ್ಯೆ ಕಾಣಿಸಿಕೊಂಡ ತಕ್ಞಣ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಕೆಲವರ ಸಲಹೆಯ ಮೇರೆಗೆ ಕೆಂಗೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆಗಾಗಿ ಸಾಲ ಮಾಡಿಕೊಂಡು ಆರ್ಥಿಕವಾಗಿ ದುರ್ಬಲವಾಗಿದ್ದೇವೆ. ಆದ್ದರಿಂದ ದಾನಿಗಳ ಸಹಾಯಾಸ್ತದ ನಿರೀಕ್ಷಿಸುತ್ತಿದ್ದೇವೆ. ಲಿವರ್ ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಮುಗಿದು, ಚೇತರಿಸಿಕೊಳ್ಳುವಷ್ಟರಲ್ಲಿ 30 ರಿಂದ 35 ಲಕ್ಷ ರೂಗಳಷ್ಟು ಖರ್ಚಾಗಬಹುದೆಂದು ವೈದ್ಯರು ಹೇಳಿದ್ದಾರೆಂದು ತಿಳಿಸಿದರು.

ಶ್ರೇಯಶ್ರಿ, ತಾಯಿ ಎಸ್.ರಾಣಿ, ಚಿಕ್ಕಪ್ಪ ಬೋರೇಗೌಡ, ತಾತ ಬಸವರಾಜ, ಗ್ರಾಮಸ್ಥರಾದ ಬಸವರಾಜು, ಪಂಚಾಕ್ಷರಿ, ರಾಜುಸ್ವಾಮಿ ಇದ್ದರು.

ತಂದೆಯಿಂದಲೇ ಲಿವರ್ ದಾನ

ಮಗಳಿಗೆ ತಂದೆಯೇ ಲಿವರ್ ಕೊಡುತ್ತಿದ್ದಾರೆ. ಶೇಖರ್ ಅವರ ಲಿವರ್‌ನಲ್ಲಿ ಶೇ.80ರಷ್ಟು ತೆಗೆದು ಶ್ರೇಯಶ್ರೀಗೆ ಹಾಕಲಾಗುತ್ತಿದೆ. ಶಸ್ತ್ರಚಿಕಿತ್ಸೆ ನಂತರ ಇಬ್ಬರು ವಿಶ್ರಾಂತಿ ಪಡೆಯಬೇಕು. ಸಹಾಯ ಮಾಡಲಿಚ್ಛಿಸುವ ದಾನಿಗಳು ಶ್ರೇಯಶ್ರೀ ಅವರ ಎಸ್‌ಬಿಐ ಬ್ಯಾಂಕ್ ಖಾತೆ ಸಂಖ್ಯೆ: 44056937495, ಐಎಫ್‌ಎಸ್‌ಸಿ ಸಂಖ್ಯೆ: SBIN0040972, ಚಿಕ್ಕಮಂಡ್ಯ ಶಾಖೆ ಅಥವಾ ಪೋನ್ ಪೇ ಸಂಖ್ಯೆ: 9480793100 ಗೆ ಧನಸಹಾಯ ಮಾಡಬಹುದು.