ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿರುವ ಅಮರ ಜ್ಯೋತಿನಗರದ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ ಸಾಯಿಬಾಬಾ ಮಂದಿರದ 13ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಅದ್ದೂರಿಯಿಂದ ಜರುಗಿದವು. ಈ ಹಿನ್ನೆಲೆ ಅಮರಜ್ಯೋತಿನಗರ, ಗಾಂಧಿನಗರ ಹಾಗೂ ಬನಶಂಕರಿಯಲ್ಲಿ ಭಿಕ್ಷಾಟನೆ ನಡೆಸಲಾಯಿತು. ಗುರುವಾರ ಬೆಳಗ್ಗೆ ಭಿಕ್ಷಾಟನೆಗೆ ಮಂದಿರದ ಸಂಸ್ಥಾಪಕ ಮಾಜಿ ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದರು. ಬೆಳಗ್ಗೆ 6 ಗಂಟೆಗೆ ಸಾಯಿಬಾಬಾ ಮೂರ್ತಿಗೆ ಕಾಕಡಾಆರತಿ, ಕ್ಷೀರಾಭಿಷೇಕ, ವಿಶೇಷ ಲೋಕಶಾಂತಿ ಹೋಮ, ಪೂರ್ಣಾಹುತಿ ಹಾಗೂ ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು.
ರಾತ್ರಿ ಪಲ್ಲಕ್ಕಿ ಉತ್ಸವ, ಶೇಜಾರತಿ ನೆರವೇರಿತು. ವಾರ್ಷಿಕೋತ್ಸವದ ಪ್ರಯುಕ್ತ ಭಕ್ತರಿಗೆ ನಿರಂತರ ದಾಸೋಹವನ್ನು ಏರ್ಪಡಿಸಲಾಗಿತ್ತು. ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಕಳೆದ 13 ವರ್ಷದ ಹಿಂದೆ ಎಲ್ಲರ ಸಹಕಾರದೊಂದಿಗೆ ಸಾಯಿಬಾಬಾ ದೇವಾಲಯವನ್ನು ನಿಮಾರ್ಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಭಕ್ತರು ಸಾಯಿಬಾಬಾ ದರ್ಶನ ಪಡೆಯುತ್ತಿದ್ದಾರೆ. ಜನರ ಆಶಯಕ್ಕೆ ಈ ದೇವಾಲಯ ಸ್ಪಂದಿಸಿದೆ. ಭಕ್ತಿ, ಜ್ಞಾನ, ದಾಸೋಹ ಕೇಂದ್ರವೂ ಕೂಡಾ ಆಗಿದ್ದು ಭಕ್ತರ ಮನೋಭಿಲಾಷೆಗಳು ಈಡೇರುತ್ತಿವೆ. ಭಿಕ್ಷಾಟನೆ ಮಾಡುತ್ತಿರುವುದು ಸಾಯಿನಾಥನ ಸಂಪ್ರದಾಯವಾಗಿದೆ ಎಂದು ಹೇಳಿದರು.
ನಾವು ಯಾವುದೇ ಕಾಯಕ, ವಿದ್ಯೆ ಸೇರಿ ನಮ್ಮ ಅಭಿಲಾಷೆಗಳು ಈಡೇರಬೇಕಾದರೆ ಗುರುವಿನ ಪ್ರೇರಣೆ ಬಹುಮುಖ್ಯ. ಪ್ರತಿ ಗುರುವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದು ಬಾಬಾರ ದರ್ಶನ ಪಡೆದು ಹೋಗುತ್ತಾರೆ. ಪ್ರಸಾದ ವ್ಯವಸ್ಥೆಯೂ ನಿರಂತರವಾಗಿದೆ ಎಂದರು. ಸಾಯಿಬಾಬಾ ಅವರಿಗೆ ಪ್ರಸಾದ ನೀಡುತ್ತಿದ್ದ ಲಕ್ಷಿ$್ಮಬಾಯಿ ಶಿಂಧೆಯವರಿಗೆ 1918ರಲ್ಲಿ ಬಾಬಾ ಅವರು ಕಾಲವಾಗುವ ಸಂದರ್ಭದಲ್ಲಿ ತಮ್ಮ ಬಳಿಯಿದ್ದ 9 ನಾಣ್ಯಗಳನ್ನು ನೀಡಿದ್ದರು. ಈ 9 ನಾಣ್ಯಗಳನ್ನು ಲಕ್ಷಿ$್ಮಬಾಯಿ ಶಿಂಧೆ ಮರಿಮಗ ಅರುಣ್ಗಾಯಕ್ವಾಡ್ ಶಿರಡಿಯಿಂದ ತಂದು ಈ ಬಾರಿ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದರು. ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೇರಿ ಅನೇಕ ಗಣ್ಯರು, ಅಪಾರ ಭಕ್ತರು ಆಗಮಿಸಿ ಬಾಬಾರ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿಯ ಕೆ.ಎಸ್.ಗುರುಸಿದ್ದಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಶಿವರುದ್ರಪ್ಪ, ರಂಗನಾಥ್, ರಕ್ಷಿತ್ಕುಮಾರ್, ಹರೀಶ್ ಭಾಗವಹಿಸಿದ್ದರು.
ನಾಣ್ಯಗಳ ದರ್ಶನ
ಸಾಯಿ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಭಕ್ತರಾದ ಲಕ್ಷಿ$್ಮಬಾಯಿ ಶಿಂಧೆ ಅವರಿಗೆ ಸಾಯಿಬಾಬಾರವರು ಪ್ರಸಾದ ರೂಪದಲ್ಲಿ ನೀಡಲಾಗಿದ್ದ 9 ನಾಣ್ಯಗಳ ದಿವ್ಯ ದರ್ಶನವನ್ನು ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಶಿರಡಿಯಿಂದ ತಂದಿದ್ದ ಈ 9 ನಾಣ್ಯಗಳ ದಿವ್ಯ ದರ್ಶನವನ್ನು ಭಕ್ತರು ಪಡೆದರು.