ಕೆ.ಆರ್.ಸಾಗರ: ತುಲಾ ಸಂಕ್ರಮಣದ ಅಂಗವಾಗಿ ಕೃಷ್ಣರಾಜ ಸಾಗರದ ಬೃಂದಾವನದಲ್ಲಿರುವ ಶ್ರೀ ಕಾವೇರಿ ಮಾತೆಯ ಸನ್ನಿಧಿಯಲ್ಲಿ ಬುಧವಾರ ರಥೋತ್ಸವ ಜರುಗಿತು.
ಬುಧವಾರ ಮುಂಜಾನೆ ತಲಕಾವೇರಿಯಲ್ಲಿ ಜರುಗಿದ ತೀರ್ಥೋದ್ಭವ ಹಿನ್ನೆಲೆಯಲ್ಲಿ ಕೆ.ಆರ್.ಸಾಗರದ ಬೃಂದಾವನದಲ್ಲಿನರುವ ಶ್ರೀ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆ ಅರ್ಚಕ ಪ್ರಸನ್ನ ಅವರ ಮನೆಯಿಂದ ಶ್ರೀ ಕಾವೇರಿ ಮಾತೆ ಉತ್ಸವಮೂರ್ತಿಯನ್ನು ಕೆ.ಆರ್.ಸಾಗರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಮೇತ ಬೃಂದಾವನಕ್ಕೆ ತರಲಾಯಿತು. ಅಣೆಕಟ್ಟೆಯ ದಕ್ಷಿಣ ದ್ವಾರದಲ್ಲಿ ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಪೂಜೆ ಸಲ್ಲಿಸಿ ಕಾವೇರಿ ಮಾತೆಯ ಉತ್ಸವ ಮೂರ್ತಿಯನ್ನು ಬರಮಾಡಿಕೊಂಡರು. ನಂತರ ಬೃಂದಾವನದಲ್ಲಿರುವ ಶ್ರೀ ಕಾವೇರಿ ಮಾತೆಗೆ ಪಂಚಾಮೃತ ಅಭಿಷೇಕ ಸಲ್ಲಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ನಂಜನಗೂಡಿನ ಪುರೋಹಿತ ನಂಜುಂಡಸ್ವಾಮಿ ನೇತೃತ್ವದಲ್ಲಿ ನವಗ್ರಹ ಮತ್ತು ಗಣಪತಿ ಹೋಮ-ಹವನ, ಮಹಾಮಂಗಳಾರತಿ ಜರುಗಿತು. ನಂತರ ಮಧ್ಯಾಹ್ನ 11.30 ರಿಂದ 11.50ರ ಶುಭ ಮುಹೂರ್ತದಲ್ಲಿ ಶ್ರೀ ಕಾವೇರಿ ಮಾತೆಯ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ಶ್ರೀ ಕಾವೇರಿ ಮಾತಾ ಪ್ರತಿಮೆ ಮುಂಭಾಗದ ಕಾರಂಜಿಯ ಸುತ್ತ ಮೂರು ಬಾರಿ ರಥೋತ್ಸವ ನಡೆಸಲಾಯಿತು.
ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಇಇ ಜಯಂತ್, ಎಇಇಗಳಾದ ಫಾರೂಕ್ ಅಬು, ಕಿಶೋರ್‌ಕುಮಾರ್, ಜಯರಾಂ, ನಿಗಮದ ತಾಂತ್ರಿಕ ಸಹಾಯಕಿ ರಶ್ಮಿ, ಕೆ.ಆರ್.ಸಾಗರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಖಜಾಂಚಿ ನಾಗೇಶ್, ಶಶಿಕಲಾ, ನಿಗಮದ ಸಿಬ್ಬಂದಿ, ಕೆ.ಆರ್.ಸಾಗರ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಇದ್ದರು.