ಜಿಲ್ಲೆ

ಲಾಭದತ್ತ ಸಾಗುತ್ತಿರುವ ಶ್ರೀ ಗುರುಸಿದ್ಧೇಶ್ವರ ಬ್ಯಾಂಕ್

ಹುಬ್ಬಳ್ಳಿ: ನಗರದ ಶ್ರೀ ಗುರುಸಿದ್ಧೇಶ್ವರ ಬ್ಯಾಂಕಿನ 44ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಶ್ರೀ ಮಹಾಂತಪ್ಪ ಅಪ್ಪಗಳ ಸಭಾ ಭವನದಲ್ಲಿ ಭಾನುವಾರ ಏರ್ಪಾಟಾಗಿತ್ತು.

ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಶ್ರೀ ಗುರುಸಿದ್ಧೇಶ್ವರ ಬ್ಯಾಂಕ್ ಪ್ರಾರಂಭದಲ್ಲಿ ರಾಜ್ಯಮಟ್ಟದಲ್ಲಿಯೇ ಮೊದಲ ಸ್ಥಾನದಲ್ಲಿತ್ತು. ಅದು ಮತ್ತೆ ರಾಜ್ಯಮಟ್ಟದಲ್ಲಿ ಬೆಳೆಯಲಿ. ನಷ್ಟದಲ್ಲಿದ್ದಾಗ ಚುಕ್ಕಾಣಿ ಹಿಡಿದ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅವರ ನೇತೃತ್ವದ ಆಡಳಿತ ಮಂಡಳಿ ಲಾಭದತ್ತ ಕೊಂಡೊಯ್ದಿದೆ. ಶಂಕರಣ್ಣ ಮುನವಳ್ಳಿ ಅವರು ಶೈಕ್ಷಣಿಕ, ಸಾಮಾಜಿಕ, ಸಹಕಾರ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ ಮುಂದಿನ ಆಡಳಿತ ಮಂಡಳಿಯು ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು.

2022-23ನೇ ಸಾಲಿಗೆ ಶೇ. 10ರಷ್ಟು ಡಿವಿಡೆಂಡ್ ಘೊಷಿಸಿದಕ್ಕೆ ಶ್ರೀಗಳು ಹರ್ಷ ವ್ಯಕ್ತಪಡಿಸಿದರು. ಬ್ಯಾಂಕಿನ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ವಾರ್ಷಿಕ ವರದಿ ಮಂಡಿಸಿದರು. ಪ್ರಸಕ್ತ ವರ್ಷದ ಎಲ್ಲ ವಿಷಯಗಳಿಗೆ ಸರ್ವಾನುಮತದ ಒಪ್ಪಿಗೆ ಪಡೆದರು.

ಉಪಾಧ್ಯಕ್ಷ ಅರವಿಂದ ಲಿಂಬಿಕಾಯಿ, ನಿರ್ದೇಶಕರಾದ ವೀರಣ್ಣ ಕಲ್ಲೂರ, ಎಫ್. ಸಿ . ಭೂಸದ, ಮಾರುತಿ ಜಾಧವ, ಮಹೇಶ ಟೆಂಗಿನಕಾಯಿ, ವಿಜಯಾನಂದ ಹೊಸಕೋಟಿ, ಲಕ್ಷ್ಮೀಕಾಂತ ಪಾಟೀಲ, ಪ್ರೇಮಾ ಆರಟ್ಟಿ, ಗೀತಾ ಮುಳ್ಳಳ್ಳಿ, ಮಂಜುನಾಥ ಮುನವಳ್ಳಿ, ಉಮೇಶ ಅಪ್ರೊಜಿ, ತಿಪ್ಪಣ್ಣಾ ಮಜ್ಜಗಿ, ಸ್ವಾಮಿ ಮಹಾಜನಶೆಟ್ಟರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮಡೊಳ್ಳಿಶೆಟ್ಟರ್ ಇತರರು ಉಪಸ್ಥಿತರಿದ್ದರು.