ಜಿಲ್ಲೆ

ಜ್ಞಾನ ಶ್ರವಣದ ಮಹತ್ವದ ಮಾಸ ಶ್ರಾವಣ

ನರಗುಂದ: ಶ್ರಾವಣ ಮಾಸವು ಜ್ಞಾನ ಶ್ರವಣ ಮಾಡಿಕೊಳ್ಳುವ ಮಹತ್ವದ ತಿಂಗಳಾಗಿದೆ. ಕೇವಲ ಶ್ರಾವಣ ಮಾಸದಲ್ಲಿ ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ತೋರಿಸುವುದರ ಬದಲು ನಿತ್ಯ ನಿರಂತರವಾಗಿರಿಸಿಕೊಳ್ಳಬೇಕು ಎಂದು ಹುಬ್ಬಳ್ಳಿಯ ರಾಜಯೋಗಿನಿ ನಿರ್ಮಲಾಜಿ ಅಕ್ಕ ಹೇಳಿದರು.

ಪ್ರಕಾಶಮಣಿ ದಾದೀಜಿಯವರ 16ನೇ ವರ್ಷದ ಸ್ಮತಿ ದಿನದ ಅಂಗವಾಗಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ಷಾ ಬಂಧನ, ವಿಶ್ವಬಂಧುತ್ವ ದಿನ, ಯುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರಾವಣದಲ್ಲಿ ಸಾಲುಸಾಲು ಹಬ್ಬಗಳನ್ನು ಆಚರಿಸಲಾಗುತ್ತದೆ. ಮೊದಲಿಗೆ ನಾಗರ ಪಂಚಮಿ ಹಬ್ಬ ಆಚರಿಸುವುದರಿಂದ ನಮ್ಮಲ್ಲಿರುವ ಪಂಚ ವಿಕಾರಗಳನ್ನು ದೂರ ಮಾಡಿಕೊಳ್ಳುವುದಾಗಿದೆ. ನಂತರ ಪರಮಾತ್ಮನಿಂದ ಶ್ರೀರಕ್ಷೆ ಪಡೆಯಲು ರಕ್ಷಾ ಬಂಧನ ಸೇರಿ ಹಲವು ಅರ್ಥಪೂರ್ಣ ಹಬ್ಬಗಳನ್ನು ಆಚರಿಸಲಾಗುತ್ತದೆ. ಭಾರತೀಯರಲ್ಲಿ ಜನಬಲ, ಧನ ಬಲವಿದೆ. ಆದರೆ, ಆಧ್ಯಾತ್ಮಿಕ ಬಲವಿಲ್ಲ. ಈ ಆಧ್ಯಾತ್ಮಿಕ ಶಕ್ತಿಯನ್ನು ಈಶ್ವರೀಯ ಶಕ್ತಿಯಿಂದ ಮಾತ್ರ ತುಂಬಿಸಿಕೊಳ್ಳಲು ಸಾಧ್ಯವಿದೆ. ಯುವಕರು ಟಿವಿ, ಮೊಬೈಲ್‌ಗಳಿಂದ ದೂರವಿದ್ದು ಜಾಗೃತರಾಗಿರಬೇಕು. ಜೀವನದಲ್ಲಿ ಆಧ್ಯಾತ್ಮಿಕತೆ ಅಳವಡಿಸಿಕೊಂಡು ದೇಶದ ಹಿರಿಮೆ, ಗರಿಮೆ ಹೆಚ್ಚಿಸಬೇಕು ಎಂದರು.

ನರಗುಂದ ಈಶ್ವರಿ ವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಮಾತನಾಡಿ, ಯುವಕರು ತಮ್ಮಲ್ಲಿರುವ ಮಾನಸಿಕ ಚಿಂತೆ, ವ್ಯರ್ಥ ವಿಚಾರಗಳನ್ನು ಕೈಬಿಟ್ಟು ಆಧ್ಯಾತ್ಮಿಕ ಚಿಂತನೆಯಲ್ಲಿ ಪಾಳ್ಗೊಳ್ಳಬೇಕು. ಆಧ್ಯಾತ್ಮಿಕತೆಯು ನಮ್ಮಲ್ಲಿರುವ ದ್ವೇಷ, ಅಸೂಯೆತನ ದೂರ ಮಾಡಿ ವಿಶ್ವ ಬಂಧುತ್ವವನ್ನು ಕಲಿಸುತ್ತದೆ. ಭೂಮಿ ಮೇಲಿರುವ ನಾವೆಲ್ಲರೂ ಒಂದೇ ಕುಟುಂಬದವರು ಎಂಬುವುದನ್ನು ತಿಳಿಸಿಕೊಡುತ್ತದೆ ಎಂದರು.

ಶಿಕ್ಷಕ ಎಸ್.ವೈ.ಪಾಟೀಲ, ಜಿ.ಆರ್.ಬೆಲ್ಲದ, ಎಂ.ಬಿ. ಪಾಟೀಲ, ಸಿ.ಬಿ. ಪಾಟೀಲ, ರಾಜಯೋಗಿನಿ ಮಂಗಳಾ, ಉಮಾ, ರಾಜೇಶ್ವರಿ ಅಕ್ಕನವರು ಹಾಗೂ ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ರಾಷ್ಟ್ರೀಯ ಸೇವಾದಳ, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು, ಈಶ್ವರೀಯ ಪರಿವಾರದವರು ಇದ್ದರು. ಡಾ. ಎಂ.ಬಿ. ವೀರನಗೌಡ್ರ, ವಿ.ಎನ್. ಕೊಳ್ಳಿಯವರ ನಿರ್ವಹಿಸಿದರು.