ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ 2ನೇ ಶ್ರಾವಣ ಶನಿವಾರ ಹಾಗೂ ಹುಣ್ಣಿಮೆ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾತಃಕಾಲದಲ್ಲಿ ದೇವರಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಟಾಲಂಕಾರ, ಮಹಾಮಂಗಳಾರತಿ ನಡೆಯಿತು. ಬೆಳಗ್ಗೆ 10.30ಕ್ಕೆ ಶ್ರೀನಿವಾಸ ದೇವರ ಶ್ರೀದೇವಿ-ಭೂದೇವಿ ಸಮೇತ ಶ್ರೀನಿವಾಸ ದೇವರ ಉತ್ಸವ ನೆರವೇರಿಸಲಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಸಂಜೆ 7 ಗಂಟೆಗೆ ದೇವರ ಉತ್ಸವ ಮತ್ತು ಮಹಾ ಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವಹಿಸಿ ಮಾತನಾಡಿ, 2ನೇ ಶ್ರಾವಣ ಶನಿವಾರದ ಅಂಗವಾಗಿ ದೇಗುಲದಲ್ಲಿ ನಡೆದ ಪೂಜೆ ಕಾರ್ಯಕ್ರಮಕ್ಕೆ ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು ಎಂದರು.