ಪಾಂಡವಪುರ: ಶ್ರಾವಣ ಮಾಸದ ಕಡೆಯ ಶನಿವಾರದ ಹಿನ್ನೆಲೆಯಲ್ಲಿ ಪಟ್ಟಣದ ಹಾರೋಹಳ್ಳಿಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ, ಧರ್ಮ ಶನೈಶ್ಚರಸ್ವಾಮಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ ಹಾಗೂ ದೇವರ ಉತ್ಸವಗಳು ನಡೆದವು.
ಸುಮಾರು 600 ವರ್ಷಗಳ ಕಾಲ ಇತಿಹಾಸವಿರುವ ಹಾರೋಹಳ್ಳಿಯ ಶ್ರೀ ಲಕ್ಷ್ಮೀನಾರಯಣಸ್ವಾಮಿ ದೇವಸ್ಥಾನದಲ್ಲಿ ಪ್ರಾತಃಕಾಲ ಗಂಗಾ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು. ಗಂಗೆಯಿಂದ ಮೂಲ ವಿಗ್ರಹ ಲಕ್ಷ್ಮೀನಾರಾಯಣಸ್ವಾಮಿಯ ಗರ್ಭಗುಡಿಯನ್ನು ಶುದ್ಧೀಕರಿಸಿದ ಬಳಿಕ ದೇವರ ವಿಗ್ರಹವನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಲಾಯಿತು. ನಂತರ ದೇವರ ಉತ್ಸವಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಉತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಸಂಖ್ಯೆ ಭಕ್ತರು ಅಡ್ಡಪಲ್ಲಕ್ಕಿ ಹೊತ್ತು ಉದ್ಘೋಷಗಳೊಂದಿಗೆ ದೇವಸ್ಥಾನ ಪ್ರದಕ್ಷಿಣಿ ಹಾಕಿದರು. ದೇವರ ಉತ್ಸವ ಕಾರ್ಯದಲ್ಲಿ ಪಾಲ್ಗೊಂಡ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಕ್ತರೊಂದಿಗೆ ದೇವರ ಪಲ್ಲಕ್ಕಿ ಉತ್ಸವಕ್ಕೆ ಹೆಗಲು ಕೊಟ್ಟು ಭಕ್ತಿ ಸಮರ್ಪಿಸಿದರು.
ಬಾಯಿಬೀಗ ಹಾಕಿಸಿಕೊಂಡು ಹರಕೆ ಸಲ್ಲಿಕೆ: ಕಷ್ಟ-ಕಾರ್ಪಣ್ಯಗಳ ಪರಿಹಾರಕ್ಕಾಗಿ ಹಾಗೂ ಸಂತಾನ ಭಾಗ್ಯ ಕರುಣಿಸುವಂತೆ ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತವರು ಉತ್ಸವದ ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಮಿಂದು ದೇವಸ್ಥಾನ ಪ್ರದಕ್ಷಿಣಿ ಹಾಕಿ ತಣ್ಣೀರು ಬಟ್ಟೆಯ ಮಡಿಯಲ್ಲಿ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸುವ ಮುತ್ತೈದೆಯರಿಂದ ಅನ್ನಪ್ರಸಾದವನ್ನು ಮಡಿಲಿಗೆ ಹಾಕಿಸಿಕೊಂಡು ಸೇವಿಸಿದರು. ಇದರಿಂದ ಸಂತಾನ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿ ಅಚಲವಾಗಿದೆ.
ಶನೈಶ್ಚರಸ್ವಾಮಿ ದೇವಸ್ಥಾನ ವಿಶೇಷ ಪೂಜೆ: ಪಟ್ಟಣದ ಮಹಾಕಾಳೇಶ್ವರಿ ಬಡಾವಣೆಯಲ್ಲಿರುವ ಧರ್ಮ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣಮಾಸದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ದೇವಸ್ಥಾನವನ್ನು ವಿದ್ಯುತ್ ದೀಪಾಂಲಕಾರಗೊಳಿಸಿ ದೇವರ ವಿಗ್ರಹವನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೂ ಸಾವಿರಾರು ಸಂಖ್ಯೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.