ವಿಜಯಪುರದ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ರಥೋತ್ಸವ ನೆರವೇರಿತು. ಅಪಾರ ಭಕ್ತರು ಇದ್ದಾರೆ.  
ಜಿಲ್ಲೆ

ಶ್ರಾವಣ ಮಾಸದ ಕಾರ್ಯಕ್ರಮಗಳು ಸಂಪನ್ನ, ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಅದ್ದೂರಿ ರಥೋತ್ಸವ

ವಿಜಯಪುರ: ಶ್ರಾವಣ ಮಾಸದ ಪ್ರಯುಕ್ತ ಶ್ರೀ ಚಿದಂಬರ ಸೇವಾ ಸಮಿತಿಯಿಂದ ‘48ನೇ ವರ್ಷದ ಶ್ರೀ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ’ ದ ಅಂಗವಾಗಿ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಸಂಪನ್ನಗೊಂಡವು.

ತನ್ನಿಮಿತ್ತ ಬೆಳಗ್ಗೆ 6ಕ್ಕೆ ಕಾಕಡಾರತಿ, 7 ಗಂಟೆಗೆ ಕ್ಷೀರಾಭಿಷೇಕ ಹಾಗೂ ರುದ್ರಾಭಿಷೇಕ, 8 ಗಂಟೆಗೆ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ ಮಹರ್ಷಿಗಳ ಅಷ್ಟೋತ್ತರ, 10 ಗಂಟೆಗೆ ಸತ್ಯ ಚಿದಂಬರ ವ್ರತ ಮತ್ತು ಕಥೆ ಪಾರಾಯಣ ಕಾರ್ಯಕ್ರಗಳು ಜರುಗಿದವು.

ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಮುರಗೋಡ ಕೆಂಗೇರಿಯ ಶಿವಚಿದಂಬರೇಶ್ವರ ಮಠದ ಪೀಠಾಧಿಪತಿ ಪಪೂ ದಿವಾಕರ ದೀಕ್ಷಿತ, ಶಂಕರ ದೀಕ್ಷಿತರು, ಪಪೂ ಬ್ರಹ್ಮಾನಂದ ಮಹಾಸ್ವಾಮಿಗಳು, ದ್ವಾದಶ ಪೀಠಾಧಿಕಾರಿ ಶ್ರೀ ಜ್ಞಾನೇಶ್ವರ ಮಠ ಲೋಕಾಪೂರ ಇವರು ಆಶೀರ್ವಚನ ನೀಡಿದರು.

ನಂತರ ಶಿವಚಿದಂಬರ ಮಹಾಸ್ವಾಮಿ ರಥೋತ್ಸವ ಜರುಗಿತು. ಶ್ರೀ ಶಿವಚಿದಂಬರೇಶ್ವರ ಮಹಾಸ್ವಾಮಿಗೆ ಮಹಾಮಂಗಳಾರತಿ, ನಂತರ ಮಹಾ ಪ್ರಸಾದ, ಸಂಜೆ ಸಾಂಪ್ರದಾಯಿಕವಾಗಿ ಶ್ರೀ ಚಿದಂಬರ ಭಜನೆ, ಮಹಾಮಂಗಳಾರತಿ, ಮಂತ್ರಪುಷ್ಪ ಜರುಗಿತು.
ಶ್ರೀ ಶಿವಚಿದಂಬರೇಶ್ವರರ ಅಸಂಖ್ಯಾತ ಭಕ್ತ ಸಮೂಹ ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು.