ಜಿಲ್ಲೆ

ಪರಶಿವನ ಸ್ಮರಣೆಗೆ ಸಮರ್ಪಿತ ಶ್ರಾವಣ ಮಾಸ: ನೆಗಳೂರಿನ ಸಂಸ್ಥಾನ ಹಿರೇಮಠದಲ್ಲಿ ಇಷ್ಟಲಿಂಗ ಪೂಜಾ ಮಂಗಲ

ಗುತ್ತಲ: ಹಿಂದುಗಳ ಪವಿತ್ರ ಮಾಸ ಎಂದರೆ ಶ್ರಾವಣ ಮಾಸ. ಶ್ರಾವಣ ಮಾಸ ಪರಶಿವನ ಸ್ಮರಣೆಗೆ ಸಮರ್ಪಿತವಾದ ಅತ್ಯಂತ ಶ್ರೇಷ್ಠ ಮಾಸವಾಗಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ಶುಕ್ರವಾರ ಶ್ರಾವಣ ಮಾಸ ಪರ್ಯಂತ ಕೈಗೊಂಡ ಇಷ್ಟಲಿಂಗ ಮಹಾ ಪೂಜೆಯ ಮಂಗಲ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಶ್ರಾವಣ ಮಾಸ ಶಿವನಿಗೆ, ಭಾದ್ರಪದ ಮಾಸ ಗಣೇಶನಿಗೆ, ಆಶ್ವೀಜ ಮಾಸ ದುರ್ಗಾದೇವಿಗೆ, ಕಾರ್ತಿಕ ಮಾಸ ಷಣ್ಮಖರ ಆರಾಧನೆಗೆ ಮೀಸಲಿಟ್ಟ ಶ್ರೇಷ್ಠ ಮಾಸಗಳಾಗಿವೆ. ಇವುಗಳನ್ನು ಚಾತುರ್ವಸ್ಯ ಎಂದು ಕರೆಯಲಾಗುತ್ತದೆ. ಚಾತುರ್ವಸ್ಯದಲ್ಲಿ ಪೂಜಿಸುವುದರಿಂದ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂದರು.

ಶ್ರಾವಣ ಮಾಸ ಶಿವ ಮತ್ತು ಪಾರ್ವತಿಯರಿಗೆ ಮೀಸಲಾದ ಮಾಸವಾಗಿದೆ. ಈ ಮಾಸದಲ್ಲಿ ಶಿವನಿಗೆ ಅಭಿಷೇಕವಾದರೆ ಪಾರ್ವತಿಗೆ ವ್ರತಾಚರಣೆೆ ಮಾಡಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಇಷ್ಟಲಿಂಗ ಪೂಜೆಯಿಂದ ಇಷ್ಟಾರ್ಥಗಳು ಲಭಿಸಲಿವೆ. ಈ ವರ್ಷದ ಶ್ರಾವಣ ಮಾಸದ ಪೂಜಾ ಫಲ ನಾಡಿನಲ್ಲಿ ಸಕಾಲಕ್ಕೆ ಮಳೆ ಬೆಳೆಯಾಗಿ ಸರ್ವರಿಗೂ ಸುಖ, ಸಂಪತ್ತು, ಆಯಸ್ಸು ವೃದ್ಧಿಸಲಿ ಎಂದರು.

ಜಿಪಂ ಮಾಜಿ ಸದಸ್ಯ ಸಿ.ಬಿ. ಕುರುವತ್ತಿಗೌಡ್ರ, ಜಾತ್ರಾಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಲಣ್ಣನವರ, ಚನ್ನಬಸಪ್ಪ ತೋಟಗೇರ, ದಯಾನಂದ ಕಟ್ಟೆಪ್ಪನವರ, ಶಂಭಣ್ಣ ಕುಪ್ಪೇಲೂರ, ಗಂಗಾಧರ ಕನವಳ್ಳಿ, ಕುಮಾರ ಚೂರಿ, ಮಾಲತೇಶ ಅಂಗಡಿ, ಶಿವಬಸಪ್ಪ ಅಂಗಡಿ, ಚನ್ನಯ್ಯ ಹಿರೇಮಠ, ಬಸಯ್ಯ ಕಟ್ಟೆಪ್ಪನವರ, ವೀರೇಶ ನೆಗಳೂರಮಠ, ಶಂಭುಲಿಂಗಯ್ಯ ಮಠದ, ಸದಾಶಿವಯ್ಯ ಹಿರೇಮಠ, ವೀರಣ್ಣ ವಿಭೂತಿ, ಮಹೇಶ ಶಾಸ್ತ್ರೀ ಹಾವೇರಿಮಠ ಹಾಗೂ ಶ್ರೀಮಠದ ಸಂಸ್ಕೃತ ಪಾಠ ಶಾಲಾ ವಿದ್ಯಾರ್ಥಿಗಳು ಇತರರು ಭಾಗಿಯಾಗಿದ್ದರು. ಗುರುಶಾಂತ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

ಸಹಸ್ರ ದೀಪರಾಧನೆ

ಶ್ರೀಗಳ ಶ್ರಾವಣ ಮಾಸ ಇಷ್ಟಲಿಂಗ ಪೂಜಾ ಮಂಗಲ ನಿಮಿತ್ತ ಭಕ್ತರು 1008 ದೀಪಗಳನ್ನು ಬೆಳಗುವುದರ ಮೂಲಕ ಗುರುಭಕ್ತಿ ಮೆರೆದರು.