ಜಿಲ್ಲೆ

ಸರ್ವರಲ್ಲೂ ಸಂಭ್ರಮ ತಂದ ಶ್ರಾವಣ

Mysuru - Desk - Ravikumar

ಗುಂಡ್ಲುಪೇಟೆ: ತಾಲೂಕಿನಾದ್ಯಂತ ಜನರು ಮೊದಲನೇ ಶ್ರಾವಣ ಶನಿವಾರವನ್ನು ಸಂಭ್ರಮದಿಂದ ಆಚರಿಸಿದರು.

ಮೊದಲೇನೇ ಶ್ರಾವಣದ ಶನಿವಾರ ಪ್ರಯುಕ್ತ ನಸುಕಿನಲ್ಲಿಯೇ ಎದ್ದು ಸ್ನಾನ ಮಾಡಿ ಶುಭ್ರ ವಸ್ತ್ರಗಳನ್ನು ಧರಿಸಿ ತಮ್ಮ ಮನೆಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಭಕ್ತರು, ನಂತರ ನಾನಾ ದೇವಾಲಯಗಳಿಗೆ ಭೇಟಿ ನೀಡಿದರು. ತಾಲೂಕಿನ ಹುಲಿಗಿನಮುರಡಿ ವೆಂಕಟರಮಣಸ್ವಾಮಿ ಬೆಟ್ಟದ ಜಾತ್ರೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟ ಮುಂತಾದ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ಪಟ್ಟಣದ ಶ್ರೀರಾಮೇಶ್ವರ ಸ್ವಾಮಿ ಎದುರು ಇರುವ ಸುಮಾರು 900 ವರ್ಷಗಳ ಇತಿಹಾಸವಿರುವ ಅಭಯ ಆಂಜನೇಯ ಸ್ವಾಮಿ ಹಾಗೂ ನವಗ್ರಹ ದೇವಾಲಯದಲ್ಲಿ ಪ್ರತಿವರ್ಷದಂತೆ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಆಂಜನೇಯನಿಗೆ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಬೆಳಗಿನಿಂದ ಅಭಿಷೇಕ ಪೂಜೆ ಮಾಡಿ ನೂತನ ವಸ್ತ್ರಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ಭಕ್ತರು ನವಗ್ರಹ ದೇವಾಲಯಕ್ಕೆ ನವಗ್ರಹ ಧಾನ್ಯಗಳನ್ನು ಕೊಟ್ಟು ಪ್ರದಕ್ಷಿಣೆ ಹಾಕಿ, ಎಳ್ಳು ದೀಪ ಹಚ್ಚಿಸಿ ಆಂಜನೇಯನಿಗೆ ಈಡುಗಾಯಿ ಹೊಡೆದು ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸಿದರು.

ಶನೈಶ್ಚರ ದೇವಾಲಯದಲ್ಲಿ ಅನ್ನ ಸಂತರ್ಪಣೆ: ಪಟ್ಟಣದ ಹೊರವಲಯದಲ್ಲಿರುವ ಕೆಬ್ಬೆಕಟ್ಟೆ ಶನೈಶ್ಚರ ದೇವಾಲಯಕ್ಕೆ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶ್ರಾವಣ ಶನಿವಾರದ ಅಂಗವಾಗಿ ದೇವಾಲಯದ ವತಿಯಿಂದ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಬೆಳಗಿನಿಂದಲೇ ಅನ್ನ ಸಂತರ್ಪಣೆ ಮಾಡಲಾಯಿತು.

ಗೋಪಾಲನ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ: ಶನಿವಾರ ಭಾನುವಾರ ಹಾಗೂ ರಜಾ ದಿನಗಳಲ್ಲಿ ತುಂಬಿ ತುಳುಕುವ ಗೋಪಾಲಸ್ವಾಮಿ ಬೆಟ್ಟಕ್ಕೆ ಜಿಟಿಜಿಟಿ ಮಳೆ ಮತ್ತು ಮಂಜು ಮುಸುಕಿದ ವಾತಾವರಣವಿದ್ದರೂ ಬೆಳಗಿನಿಂದ ಪ್ರವಾಸಿಗರ ಸಾಗರವೇ ಹರಿದುಬಂದಿತು. ಪಟ್ಟಣದ ಸಾರಿಗೆ ಬಸ್ ಡಿಪೋದಿಂದ 14 ಬಸ್ಸುಗಳನ್ನು ನಿಯೋಜಿಸಿದ್ದರೂ ಪ್ರವಾಹದಂತೆ ಹರಿದುಬರುತ್ತಿದ್ದ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿತ್ತು. ಸಬ್‌ಇನ್‌ಸ್ಪೆಕ್ಟರ್ ಸಾಹೇಬಗೌಡ ನೇತೃತ್ವದಲ್ಲಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.